ಮುಂಬೈ: ಸಿರಿಯಾದಲ್ಲಿ ಇಸಿಸ್ ಹೋರಾಟದಲ್ಲಿ ಸಾವಿಗೀಡಾಗಿದ್ದಾನೆ ಎಂದು ನಂಬಲಾಗಿದ್ದ ಮುಂಬೈಯ ಕಲ್ಯಾಣ್ ನಿವಾಸಿ 23ರ ಹರೆಯದ ಆರಿಫ್ ಮಜೀದ್ ಶುಕ್ರವಾರ ಮನೆಗೆ ವಾಪಾಸ್ ಆಗಿದ್ದಾನೆ. ಮನೆಗೆ ಹಿಂತಿರುಗಿರುವ ಈತನನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಗೊಳಪಡಿಸಿದೆ.
ಕಳೆದ ಮೇ ತಿಂಗಳಲ್ಲಿ ಕಲ್ಯಾಣ್ ನಗರದಿಂದ ಆರಿಫ್ ಮಜೀದ್, ಶಹೀನ್ ತಂಕೀ, ಫಹಾದ್ ಶೇಖ್ ಮತ್ತು ಅಮನ್ ತಂಡೇಲ್ ಎಂಬ ಯುವಕರು ಮಧ್ಯಪ್ರಾಚ್ಯದ ಪವಿತ್ರ ಸ್ಥಳಗಳನ್ನು ವೀಕ್ಷಿಸಲು ತೆರಳಿದ್ದು, ಅಲ್ಲಿ ನಾಪತ್ತೆಯಾಗಿದ್ದರು.ಈ ಯುವಕರು ಅಲ್ಲಿ ಉಗ್ರ ಸಂಘಟನೆಯಾದ ಇಸಿಸ್‌ಗೆ ಸೇರಿದ್ದಾರೆ ಎಂದು ಶಂಕಿಸಲಾಗಿತ್ತು.
ಆರಿಫ್ ಇಂದು ಬೆಳಗ್ಗೆ ಮನೆಗೆ ವಾಪಾಸಾಗಿದ್ದು, ಎನ್‌ಐಎ ತನಿಖೆಗೊಳಪಡಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರಿಫ್ ಅವರ ಅಪ್ಪ ಇಜಾಜ್ ಅವರಿಗೆ ತನಿಖಾ ದಳ ಫೋನ್ ಮಾಡಿ ಆರಿಫ್ ಮುಂಬೈಗೆ ಬಂದಿರುವ ವಿಷಯವನ್ನು ತಿಳಿಸಿದೆ ಎಂದು ಆರಿಫ್ ಕುಟುಂಬದ ಸ್ನೇಹಿತರಾದ ಇಫ್ತಿಕಾರ್ ಖಾನ್ ಮಾಧ್ಯಮದವರಲ್ಲಿ ಹೇಳಿದ್ದಾರೆ.
ಪೊಲೀಸರ ಪ್ರಕಾರ 4 ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೇ 23ರಂದು ಬಾಗ್ದಾದ್ ಗೆ ಹೋಗಿದ್ದಾರೆ. ಈ ವಿದ್ಯಾರ್ಥಿಗಳು ಇರಾಖ್‌ನ ಪವಿತ್ರ ಸ್ಥಳಗಳನ್ನು ಸಂದರ್ಶಿಸುತ್ತಿದ್ದ 22 ತೀರ್ಥಯಾತ್ರಿಕರ ಗುಂಪಲ್ಲಿ ಬಂದಿದ್ದವರಾಗಿದ್ದರು. ಮರುದಿನ ಆರಿಫ್ ಆತನ ಕುಟುಂಬದವರಿಗೆ ಫೋನ್ ಮಾಡಿ ತಾನು ಯಾರಿಗೂ ತಿಳಿಸದೆ ಇಲ್ಲಿಗೆ ಬಂದಿರುವುದಕ್ಕೆ ಕ್ಷಮಿಸಬೇಕೆಂದು ಕೇಳಿಕೊಂಡಿದ್ದನು. ತಮ್ಮ ಜತೆಗಿದ್ದ ಆರಿಫ್, ಫಹಾದ್, ಅಮನ್ ಮತ್ತು ಸಹೀನ್ ಎಂಬ ಯುವಕರು ಬಾಗ್ದಾದ್‌ನಲ್ಲಿರುವ ಫಲ್ಲುಜಾ ನಗರಕ್ಕೆ ಟ್ಯಾಕ್ಸಿಯಲ್ಲಿ ತೆರಳಿದ್ದಾರೆ ಎಂದು ಭಾರತಕ್ಕೆ ಮರಳಿದ್ದ ತೀರ್ಥಯಾತ್ರಿಕರು ಪೊಲೀಸರಲ್ಲಿ ಹೇಳಿದ್ದರು.
ಆಗಸ್ಟ್ 26ಕ್ಕೆ ತಂಕೀ ಎಂಬಾತ ಆರಿಫ್‌ನ ಕುಟುಂಬದವರಿಗೆ ಫೋನ್ ಮಾಡಿ ನಿಮ್ಮ ಮಗ ಹುತಾತ್ಮನಾಗಿದ್ದಾನೆ . ಆತ ಸಿರಿಯಾದಲ್ಲಿ ಇಸಿಸ್‌ಗಾಗಿ ಹೋರಾಡುತ್ತಿದ್ದಾಗ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದ್ದನು.
ಮರುದಿನ ಆರಿಫ್‌ನ ಕುಟುಂಬ ಜನಾಜಾ -ಇ-ಗಾಯಬಾನಾ (ಮೃತದೇಹ ಸಿಗದೇ ಇರುವ ಮನುಷ್ಯನ ಆತ್ಮಕ್ಕೆ ಶಾಂತಿಕೋರುವ ಪ್ರಾರ್ಥನೆ) ನಡೆಸಿತ್ತು.
ಇತ್ತೀಚೆಗೆ ತನಿಖಾ ದಳವನ್ನು ಭೇಟಿ ಮಾಡಿದ ಆರಿಫ್‌ರ ಅಪ್ಪ ತನ್ನ ಮಗ ಉಗ್ರ ಸಂಘಟನೆಯೊಂದಿಗೆ ಮೂರು ತಿಂಗಳುಗಳ ಕಾಲ ಹೋರಾಡಿ ಟರ್ಕಿಗೆ ಹೋಗಿದ್ದು, ಅಲ್ಲಿಂದ ಭಾರತಕ್ಕೆ ಬರುವವನಿದ್ದಾನೆ ಎಂದು ತಿಳಿಸಿದ್ದರು.