ಭಾರತದ ಸಾಂಸ್ಕೃತಿಕ ಮುಖ ಬದಲಿಸಿದ ಪ್ರಧಾನಿ: ಶಿವಸೇನೆ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಸಾಂಸ್ಕೃತಿಕ ಮುಖವನ್ನೇ ಬದಲಿಸಿದ್ದಾರೆ ಎಂದು ಶಿವಸೇನೆ ಹೇಳಿದೆ.
ಮುಂಬೈ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಸಾಂಸ್ಕೃತಿಕ ಮುಖವನ್ನೇ ಬದಲಿಸಿದ್ದಾರೆ ಎಂದು ಶಿವಸೇನೆ ಹೇಳಿದೆ.
ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಕಡಿತದ ಬಳಿಕ ಬಿಜೆಪಿ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದ ಶಿವಸೇನೆ, ಇದೀಗ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಉಂಟಾದ ಬದಲಾವಣೆಯಿಂದಾಗಿ ಮೆತ್ತಗಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತದ ಸಾಂಸ್ಕೃತಿಕ ಮುಖವನ್ನೇ ಬದಲಿಸಿದ್ದು, ಇಷ್ಟು ದಿನ ಇಫ್ರಿಯಾರ್ ಮತ್ತು ಈದ್ ಹಬ್ಬಗಳ ಕೂಟಗಳಲ್ಲಿ ಭಾಗವಹಿಸುತ್ತಿದ್ದ ನಾಯಕರು ಇದೀಗ ದೀಪಾವಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಶಿವಸೇನೆ, ನಿನ್ನೆಯವರೆಗೂ ಈದ್ ಮತ್ತು ಇಫ್ತಿಯಾರ್ ಕೂಟಗಳಲ್ಲಿ ಭಾಗವಹಿಸುತ್ತಿದ್ದ ನಾಯಕರು ಇದೀಗ ದೀಪಾವಳಿಯನ್ನು ಕೂಡ ಆಚರಿಸುತ್ತಿದ್ದಾರೆ. ಇದು ಸ್ವಾಗತಾರ್ಹ ವಿಷಯವಾಗಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಬೇಕು. ಈ ಹಿಂದೆ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮೊರೆ ಹೋಗಿ ಅಲ್ಪ ಸಂಖ್ಯಾತರನ್ನು ಓಲೈಸುವ ಸಲುವಾಗಿ ಈದ್ ಮತ್ತು ಇಫ್ತಿಯಾರ್ ಕೂಟಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿತ್ತು. ಇದೀಗ ಅಂತಹ ನೀಚ ರಾಜಕಾರಣ ಕೊನೆಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಾಂಸ್ಕೃತಿಕ ಮುಖಛರ್ಯೆಯನ್ನೇ ಬದಲಾವಣೆ ಮಾಡಿದ್ದಾರೆ ಎಂದು ಶಿವಸೇನೆ ಹೇಳಿದೆ.
ಅಲ್ಲದೆ ಬಡತನ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಯೋಜನೆಗಳು ಕುರಿತಾಗಿಯೂ ತನ್ನ ಬೆಂಬಲ ಸೂಚಿಸಿರುವ ಶಿವಸೇನೆ, ಇಂತಹ ಪ್ರಬಲ ಸಮಸ್ಯೆ ನಿವಾರಣೆಗೆ ಕಠಿಣ ನಿರ್ಧಾರಗಳು ಅಗತ್ಯ ಎಂದು ಹೇಳಿದೆ. ನಿನ್ನೆಯಷ್ಟೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಲು ಬಿಜೆಪಿಗೆ ಬೆಂಬಲ ಸೂಚಿಸಿದ್ದ ಶಿವಸೇನೆ ಅದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಓಲೈಕೆ ಮಾಡಲು ಯತ್ನಿಸುತ್ತಿದ್ದು, ಆ ಮೂಲಕ ಮುಂದಿನ ಮಹಾರಾಷ್ಟ್ರ ಸರ್ಕಾರದಲ್ಲಿ ತಾನು ಪಾಲ್ಗೊಳ್ಳುವುದು ಖಚಿತ ಎಂಬ ಸಂದೇಶವನ್ನು ಶಿವಸೇನೆ ಪರೋಕ್ಷವಾಗಿ ರವಾನೆ ಮಾಡುತ್ತಿದೆ.