ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಸಾರ ಭಾರತಿಗೆ ಇನ್ನು ಮುಂದೆ ಕನ್ನಡ ಪ್ರಕಾಶ

ಪ್ರಸಾರಭಾರತಿ ಮಂಡಳಿ ಅಧ್ಯಕ್ಷರಾಗಿ ಹಿರಿಯ

Srinivasa Murthy VN
Updated On : 29 Oct 2014, 8:41 am

ನವದೆಹಲಿ: ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ, ಕನ್ನಡಿಗ ಡಾ.ಅರಕಲಗೂಡು ಸೂರ್ಯ ಪ್ರಕಾಶ್ ಅವರನ್ನು ನೇಮಿಸಲಾಗಿದೆ. ಅವರ ಸೇವೆಯ ಅವಧಿ ಮೂರು ವರ್ಷಗಳು. ಸೂರ್ಯ ಪ್ರಕಾಶ್ ದೆಹಲಿ ಮೂಲದ ಚಿಂತಕರ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಗೌರವ ಸದಸ್ಯರೂ ಆಗಿದ್ದಾರೆ. ಪತ್ರಕರ್ತ ದಿ.ಎಂ.ಕಾಮತ್ ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ನೇತೃತ್ವದಲ್ಲಿ ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಹಾಗೂ ವಾರ್ತಾ ಪ್ರಸಾರ ಇಲಾಖೆ ಕಾರ್ಯದರ್ಶಿಅವರನ್ನೊಳಗೊಂಡ ತ್ರಿಸದಸ್ಯರ ಸಮಿತಿಯು ಪ್ರಸಾರ ಭಾರತಿ ಅಧ್ಯಕ್ಷ ಸ್ಥಾನಕ್ಕೆ ಸೂರ್ಯ ಪ್ರಕಾಶ್ ಹೆಸರನ್ನು ಶಿಫಾರಸು ಮಾಡಿತ್ತು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ವಿಸ್ಮೃತ ಅನುಭವ ಪಡೆದಿರುವ ಅವರು ಪ್ರಸ್ತುತ ಪಯೋನೀರ್ ಆಂಗ್ಲ ಪತ್ರಿಕೆಯ ಸಲಹಾ ಸಂಪಾದಕರಾಗಿದ್ದಾರೆ. ಸೂರ್ಯ ಪ್ರಕಾಶ್ ಅವರದ್ದು ಪತ್ರಿಕೋಧ್ಯಮದಲ್ಲಿ ನಾಲ್ಕು ದಶಕಗಳ ಸುದೀರ್ಘ, ಸಾರ್ಥಕ ಅನುಭವ. ವರದಿಗಾರರಾಗಿ ಕಾರ್ಯಾರಂಭ ಮಾಡಿದ ಕೆಲವೇ ವರ್ಷಗಳಲ್ಲಿ ಅತ್ಯುನ್ನತ ಸಂಪಾದಕ ಹುದ್ದೆಯನ್ನು ಅಲಂಕರಿಸಿದವರು. ಗುಣಮಟ್ಟದ ಪತ್ರಕರ್ತರನ್ನು ಸೃಷ್ಟಿಸಲು ಪತ್ರಿಕೋಧ್ಯಮ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸುವ ಅವರು ಮಾಧ್ಯಮ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಹೌದು.

ಝೀ ನ್ಯೂಸ್ ಚಾನಲೆ ಸಂಪಾದಕ, ಪಯೋನೀರ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ. ಬ್ಯಾಂಕಾಕ್ ಮೂಲದ ಏಷ್ಯಾ ಟೈಮ್ಸ್‌ನ ಭಾರತೀಯ ಆವೃತ್ತಿಯ ಸಂಪಾದಕ, ಈನಾಡು ಸಮೂಹ ರಾಜಕೀಯ ಸಂಪಾದಕ, ಇಂಡಿಯನ್ ಎಕ್ಸ್‌ಪ್ರೆಸ್‌ನ ದೆಹಲಿ ಬ್ಯೂರೋ ಮುಖ್ಯಸ್ಥ ಹುದ್ದೆಗಳು ಸೇರಿದಂತೆ ಅವರು ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇನ್‌ಸ್ಟಿಟ್ಯೂಟ್ ಆಫ್ ಇಂಟಗ್ರೇಟೆಡ್ ಲರ್ನಿಂಗ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಫಿಲ್ಮ್ ಅಂಡ್ ಮೀಡಿಯಾ ಸ್ಕೂಲ್‌ನ ಸ್ಥಾಪಕ ನಿರ್ದೇಶಕರು.

ಜತಗೆ ಪಯೋನೀರ್ ಮೀಡಿಯಾ ಸ್ಕೂಲ್‌ನ ಸ್ಥಾಪಕ ನಿರ್ದೇಶಕರು ಕೂಡಾ ಹೌದು. ಸುದ್ದಿ ಹಿಂದಿನ ಸತ್ಯ ಮತ್ತು ಸ್ವಾರಸ್ಯ ಎರಡನ್ನು ಸೂರ್ಯ ಪ್ರಕಾಶ್ ಅರಸುತ್ತಿದ್ದರು. ಕಿರಿಯ ಸಹೋದ್ಯೋಗಿಗಳಿಗೆ ಅವರು ಅದನ್ನು ಕಲಿಸುತ್ತಿದ್ದಾರೆ. ಈಗ ಅವರು ದೇಶದ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಹಾಗೂ ಶೋತೃಗಳನ್ನು ಹೊಂದಿರುವ ದೂರದರ್ಶನ ಮತ್ತು ಆಕಾಶವಾಣಿಯ ಸಾರಥಿಯಾಗಿದ್ದಾರೆ.

ಚಾನಲ್‌ಗಳಲ್ಲಿ ಸುದ್ದಿಗಿಂತ ಸದ್ದೇ ಹೆಚ್ಚು
ಪ್ರಸಾರ ಭಾರತಿ ಅಧ್ಯಕ್ಷ. ಕನ್ನಡಿಗ ಸೂರ್ಯ ಪ್ರಕಾಶ್ ಅಭಿಪ್ರಾಯ
-ವಿನಾಯಕ ಭಟ್ಟ ಮೂರೂರು
ಬೆಂಗಳೂರು:
ಇಂದು ಚಾನೆಲ್‌ಗಳಲ್ಲಿ ಸುದ್ದಿಗಿಂತ ಸದ್ದು ಜಾಸ್ತಿ. ಸದ್ದಿಲ್ಲದೆ ಶುದ್ಧ ಸುದ್ಧಿ ನೀಡುವ ಚಾನೆಲ್‌ನ ಇಂದೂ ನೋಡುಗರಿದ್ದಾರೆ. ಸಾಮಾಜಿಕ ಜವಾಬ್ದಾರಿ ಹಾಗೂ ಇತಿಮಿತಿಗಳ ನಡುವೆಯೂ ಪ್ರಸಾರ ಭಾರತಿಯನ್ನು ಸ್ವಾವಲಂಬಿಯನ್ನಾಗಿ ಮಾಡುವ ಸದುದ್ದೇಶ ನನ್ನದು.

ಇದು ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕಗೊಂಡ ಕನ್ನಡಿಗ ಅರಕಲಗೂಡು ಸೂರ್ಯಪ್ರಕಾಶ್ ಅವರ ಆತ್ಮವಿಶ್ವಾಸದ ನುಡಿ. ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕಗೊಂಡ ದಿನವೇ ಕನ್ನಡಪ್ರಭಕ್ಕೆ ದೂರವಾಣಿಯಲ್ಲೇ ಸಂದರ್ಶನ ನೀಡಿದ ಅವರು, ಪ್ರಸಾರ ಭಾರತಿ ಅಧ್ಯಶ್ರರಾಗಿ ಮಾಡಬೇಕಿರುವ ಕೆಸಲಗಳ ಬಗ್ಗೆ ಸ್ಥೂಲವಾಗಿ ಮಾತನಾಡಿದ್ದಾರೆ.

ಸದ್ದೇ ಹೆಚ್ಚು: ಇವತ್ತಿನ ನ್ಯೂಸ್ ಚಾನೆಲ್‌ಗಳನ್ನು ನೋಡಿದರೆ ಸುದ್ದಿಗಿಂತ ಸದ್ದೇ ಹೆಚ್ಚು. ಬಹುತೇಕ ಎಲ್ಲ ಭಾಷೆಯ ಸುದ್ದಿ ಚಾನೆಲ್‌ಗಳಲ್ಲೂ ಪ್ರೈಮ್‌ಟೈಮ್ ನಲ್ಲಿ, ದಿನವಿಡೀ ಕೆಲಸ ಮಾಡಿ ಮನೆಗೆ ಬಂದವರು ಹಾಯಾಗಿ ಕುಳಿತು ಊಟ ಮಾಡುವ ಹೊತ್ತಿನಲ್ಲಿ ರಾಜಕೀಯ ಅಥವಾ ವಿವಾದಾತ್ಮಕ ಅಂಶಗಳ ಚರ್ಚೆ ನಡೆಯುತ್ತಿರುತ್ತದೆ. ಅವರಿಗೆ ಸುದ್ದಿ ದೊರೆಯುವುದೇ ಇಲ್ಲ. ಇಂದಿಗೂ ಉತ್ತಮ ಸುದ್ದಿ ಇದ್ದಕೆ ಖಂಡಿತ ನೋಡುಗರು ಬರುತ್ತಾರೆ. ಇರುವ ಚಾನಲ್ಲನ್ನೇ ಗುಣಮಟ್ಟದ ಸುದ್ದಿ ಚಾನೆಲ್ ಮಾಡಿದರೆ ಸಾಕು. ರನ್ ಆರ್ಡರ್ ಪ್ರಕಾರ ಗುಣಮಟ್ಟದ ಸುದ್ದಿ ಮಾಡಿದರೆ ಜನರನ್ನು ಶಿಕ್ಷಿತರನ್ನಾಗಿ ಮಾಡುವ ಮಾಹಿತಿ ನೀಡುವ ಸದಭಿರುಚಿಯ ಸುದ್ದಿಗಳಿದ್ದರೆ ಖಂಡಿತಾ ನೋಡುಗರು ಇರುತ್ತಾರೆ.

ಖಾಸಗಿ ಸುದ್ದಿ ಚಾನಲ್‌ಗಳಿಗೆ ಹೋಲಿಸಿದರೆ ದೂರದರ್ಶನದ ಗುಣಮಟ್ಟ ಉತ್ತಮ ಪಡಿಸಬೇಕಿದೆ. ಪ್ರಸಾರ ಭಾರತಿಗೆ ವರ್ಷಕ್ಕೆ 4 ಸಾವಿರ ಕೋಟಿ ಬಜೆಟ್ ಇದೆ. ಆ ಹಣ ಹೇಗೆ ಮತ್ತು ಯಾಕೆ ಬಳಕೆಯಾಗುತ್ತಿದೆ ಎಂಬುದನ್ನು ಅಲ್ಲಿ ಹೋದ ಮೇಲೆ ತಿಳಿದುಕೊಳ್ಳಬೇಕು. ಆ ನಂತರ ದೂರದರ್ಶನ ಮತ್ತು ಖಾಸಗಿ ಚಾನೆಲ್ ನಡುವಿನ ಗುಣಮಟ್ಟದಲ್ಲಿರುವ ವ್ಯತ್ಯಾಸ ನಿವಾರಿಸಬೇಕು. ಆಗ ಮಾತ್ರ ಖಾಸಗಿ ಚಾನೆಲ್‌ಗಳೊಂದಿಗೆ ಪೈಪೋಟಿ ನೀಡಲು ಸಾಧ್ಯ.

ಮುಖವಾಣಿ ಆರೋಪ ಸತ್ಯ: ಪ್ರಸಾರ ಭಾರತಿ ಅಥವಾ ದೂರದರ್ಶನ ಮತ್ತು ಆಕಾಶವಾಣಿ ಅಂದರೆ ಸರ್ಕಾರದ ಮುಖವಾಣಿಗಳು ಎಂಬ ಆರೋಪ ನಿಜ. ಆದರೆ ಆದು ಹಳೆಯ ಆರೋಪ. 1997ರಲ್ಲಿ ಪ್ರಸಾರ ಭಾರತಿ ಕಾನೂನು ಮಾಡಿದ್ದೇ ಈ ಸಂಸ್ಥೆಗಳನ್ನು ಸ್ವಾಯತ್ತ ಸಂಸ್ಥೆಗಳಾಗಿ ಮಾಡಲು, ಪ್ರಸಾರ ಭಾರತಿ ಕಾನೂನಿನ ಮೂಲ ಉದ್ದೇಶವೇ ಅದು ಅದರ ನಂತರ ಪ್ರಸಾರ ಭಾರತಿ ಸರ್ಕಾರ ಭಾಗವಾಗಿ ಉಳಿದಿಲ್ಲ. ನಾನು ಪ್ರಸಾರ ಭಾರತಿ ಅಧ್ಯಕ್ಷನಾದರೂ ಸರ್ಕಾರ ಭಾಗವಲ್ಲ. ಪ್ರಸಾರ ಭಾರತಿಗೆ ಮಾಧ್ಯಮ ಪ್ರಪಂಚದಸಲ್ಲಿ ಅನುಭವ ಇರುವವರೇ ಅಧ್ಯಕ್ಷರಾಗಬೇಕು. ಆಗ ಪ್ರಸಾರ ಭಾರತಿಗೆ ವೃತ್ತಿಪರ ನಿಲುವು ಸಿಗಲು ಸಾಧ್ಯ.

ಇಂದಿಗೂ ಕೇಂದ್ರ ಸರ್ಕಾರ ಪ್ರಸಾರ ಭಾರತಿಗೆ ಪ್ರತಿ ವರ್ಷ 1950 ಕೋಟಿ ನೀಡುತ್ತಿದೆ. ಇದು ಸರ್ಕಾರ ಅಥವಾ ಸಾರ್ವಜನಿಕರ ಹಣ. ಅದು ಸುಖಾಸುಮ್ಮನೆ  ಒಂದು ಸಂಸ್ಥೆಗೆ ನೀಡುವಂತಾಗಬಾರದು. ಈ ನಿಟ್ಟಿನಲ್ಲಿ ಪ್ರಸಾರ ಭಾರತಿ ಸ್ವಾವಲಂಬಿಯಾಗಬೇಕಿದೆ. ಆ ಬಗ್ಗೆ ನಾವೆಲ್ಲ ವಿಚಾರ ಮಾಡುವ ಕಾಲ ಬಂದಿದೆ. ಹಾಗಂತ ದೂರದರ್ಶನ ಅಥವಾ ಆಕಾಶವಾಣಿಯನ್ನು ಸಂಪೂರ್ಣ ವಾಣಿಜ್ಯ ಸಂಸ್ಥೆಯನ್ನಾಗಿ ಮಾಡಿಬಿಡುತ್ತೇವೆ ಎಂದರ್ಥವಲ್ಲ. ಆದರೆ ಅತ್ತ ಗಮನಹರಿಸಬೇಕಾದ ಅಗತ್ಯವಿದೆ. ಪ್ರಸಾರ ಭಾರತಿ ಎಂಬುದು ಕೇಂದ್ರ ಸರ್ಕಾರಕ್ಕೆ ಹೊರೆಯಾಗಗಿ ಪರಿಣಮಿಸಬಾರದು ಎಂಬುದು ನನ್ನ ಉದ್ದೇಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement