ಶಿಕ್ಷಕರಿಗೆ ಉಪನ್ಯಾಸ
ಅಧ್ಯಾಪನ ಎಂಬುದು ವೃತ್ತಿಯಲ್ಲ, ಅದೊಂದು ಜೀವನ ಧರ್ಮ. 'ಶಿಕ್ಷಕರೇ ವಿಶ್ವಾದ್ಯಂತ ಆಗುತ್ತಿರುವ ಬದಲಾವಣೆಗಳನ್ನು ಅರಿತುಕೊಂಡು, ಅದರಂತೆಯೇ ಹೊಸ ತಲೆಮಾರನ್ನು ರೂಪಿಸಿ'...
ನವದೆಹಲಿ: ಅಧ್ಯಾಪನ ಎಂಬುದು ವೃತ್ತಿಯಲ್ಲ, ಅದೊಂದು ಜೀವನ ಧರ್ಮ.
'ಶಿಕ್ಷಕರೇ ವಿಶ್ವಾದ್ಯಂತ ಆಗುತ್ತಿರುವ ಬದಲಾವಣೆಗಳನ್ನು ಅರಿತುಕೊಂಡು, ಅದರಂತೆಯೇ ಹೊಸ ತಲೆಮಾರನ್ನು ರೂಪಿಸಿ'. ಶಿಕ್ಷಕರ ದಿನಾಚರಣೆಯ ಮುನ್ನಾದಿನವಾದ ಗುರುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಕರಿಗೆ ನೀಡಿದ ಕರೆಯಿದು. ಶುಕ್ರವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪಡೆಯಲಿರುವ 350 ಶಿಕ್ಷಕರೊಂದಿಗೆ ಗುರುವಾರ ಮೋದಿ ಸಂವಾದ ನಡೆಸಿದರು.
ನನ್ನ ಆಸೆ ಈಡೇರಿತು
ಶಿಕ್ಷಕ ಎಂದಿಗೂ ನಿವೃತ್ತಿಯಾಗುವುದಿಲ್ಲ. ಆತ ಯಾವತ್ತೂ ಹೊಸ ತಲೆಮಾರಿಗೆ ಶಿಕ್ಷಣ ನೀಡಲು ಹವಣಿಸುತ್ತಿರುತ್ತಾನೆ. ಸಮಾಜವು ಪ್ರಗತಿಪಥದತ್ತ ಸಾಗಬೇಕೆಂದರೆ, ಶಿಕ್ಷಕರು ಎರಡು ಹೆಜ್ಜೆ ಮುಂದಿರಬೇಕು. ಜಗತ್ತಿನಾದ್ಯಂತ ಆಗುತ್ತಿರುವ ಬದಲಾವಣೆಗಳನ್ನು ಅರಿತು, ಅದೇ ನಿಟ್ಟಿನಲ್ಲಿ ಹೊಸ ಪೀಳಿಗೆಯನ್ನು ರೂಪಿಸಬೇಕು. ಎಂದು ಪ್ರಧಾನಿ ಹೇಳಿದರು. 'ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ನಾನು 2 ಕನಸುಗಳನ್ನು ಕಂಡಿದ್ದೆ. ಮೊದಲನೆಯದ್ದು ನನ್ನ ಬಾಲ್ಯದ ಗೆಳೆಯರನ್ನು ಭೇಟಿಯಾಗುವುದು, ಎರಡನೆಯದ್ದು ನನ್ನ ಅಧ್ಯಾಪಕರನ್ನು ಅಭಿನಂದಿಸುವುದು. ಅಂತೂ ನಾನು ಎರಡು ಆಸೆಗಳನ್ನೂ ಈಡೇರಿಸಿಕೊಂಡೆ ಎಂಬುದನ್ನು ಅವರು ನೆನಪಿಸಿಕೊಂಡರು.
ಇಂದು ಮಕ್ಕಳೊಂದಿಗೆ ಮಾತು
ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಇಂದು (ಶುಕ್ರವಾರ) ಪ್ರಧಾನಿ ಮೋದಿ ಮಾಡುವ ಭಾಷಣವನ್ನು ದೇಶಾದ್ಯಂತದ ಶಾಲಾಮಕ್ಕಳು ವೀಕ್ಷಿಸಲಿದ್ದಾರೆ. ಪ್ರಧಾನಿಯ ಭಾಷಣ ಹಾಗೂ ಮಕ್ಕಳೊಂದಿಗೆ ನಡೆಸಿದ ಸಂವಾದವನ್ನು ಟಿವಿ, ರೇಡಿಯೋ ಹಾಗೂ ಅಂತರ್ಜಾಲದ ಮೂಲಕ ಎಲ್ಲ ಶಾಲೆಗಳ ವಿದ್ಯಾರ್ಥಿಗಳೂ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಇಂತಹುದೊಂದು ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ಇದಕ್ಕಾಗಿ ಸಂಜೆ 5 ಗಂಟೆಯವರೆಗೆ ಶಾಲೆಯಲ್ಲೇ ಇರುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಇದೇ ವೇಳೆ ಪ್ರಧಾನಿ ಭಾಷಣ ಲೈವ್ ಪ್ರಸಾರಕ್ಕೆ ಕೆಲವು ರಾಜ್ಯಗಳಲ್ಲಿ ವ್ಯಕ್ತವಾಗಿದೆ. ಸರ್ಕಾರದ ಆದೇಶವನ್ನು ನಾವು ಪಾಲಿಸುವುದಿಲ್ಲ ಎಂದು ಪಶ್ಚಿಮ ಬಂಗಾಳದ ಸರ್ಕಾರ ಕಡ್ಡಿ ಮುರಿದಂತೆ ಹೇಳಿದೆ. ಮತ್ತೊಂದೆಡೆ ಮಕ್ಕಳಿಗೆ ಭಾಷಣ ವೀಕ್ಷಿಸುವಂತೆ ಒತ್ತಡ ಹೇರುವುದು ಸರಿಯಲ್ಲ ಎಂದು ಗೋವಾ ಕಾಂಗ್ರೆಸ್ ಹೇಳಿದೆ.
ವಿಶೇಷವೆಂದರೆ, ಉತ್ತರಪ್ರದೇಶ ಸಿಎಂ ಅಖಿಲೇಶ್ ಯಾದವ್ ಅವರು ಕೇಂದ್ರದ ಆದೇಶವನ್ನು ಯಥಾವತ್ ಪಾಲಿಸಿದ್ದು, ಸ್ವಯಂ ಪ್ರೇರಿತವಾಗಿ ಎಲ್ಲ ಸಿದ್ದತೆಗಳನ್ನು ನಡೆಸಿದ್ದಾರೆ.