ರಾಘವೇಶ್ವರ ಶ್ರೀಗಳ ಬಂಧನಕ್ಕೆ ತಡೆಯಾಜ್ಞೆ
ರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಭಾರತಿ ಶ್ರೀಗಳನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಬೆಂಗಳೂರು: ರಾಮಚಂದ್ರಾಪುರ ಮಠಾಧೀಶರಾದ ರಾಘವೇಶ್ವರ ಭಾರತಿ ಶ್ರೀಗಳನ್ನು ಬಂಧಿಸುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ನಿನ್ನೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 1 ದಿನ ಮುಂದೂಡುವಂತೆ ಹೇಳಿತ್ತು. ಆದರೆ ಇಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ನೀಡಿರುವ ನ್ಯಾಯಾಲಯ ಪ್ರಕರಣದ ತನಿಖೆಗೆ 1 ವಾರಗಳ ಕಾಲ ತಡೆ ನೀಡಿದೆ. ರಾಮಚಂದ್ರಾಪುರದ ಮಠಾಧೀಶರಾದ ರಾಘವೇಶ್ವರ ಶ್ರೀಗಳ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ಹಿಂದಿನಿಂದಲೂ ಮಠದ ವಿರುದ್ಧ ಕೆಲವು ದೂರುಗಳ ದಾಖಲಾಗಿದ್ದವು. ದುರುದ್ದೇಶಪೂರ್ವಕವಾಗಿ ಮಠದ ವಿರುದ್ಧ ಕೆಲವರು ಪಿಐಎಲ್‌ಗಳನ್ನು ದಾಖಲಿಸಿದ್ದರು.
ಪ್ರಸ್ತುತ ಪ್ರಕರಣ ಕೂಡ ಆದರ ಮುಂದುವರೆದ ಭಾಗವಾಗಿರಬಹುದು. ಹೀಗಾಗಿ ಪ್ರಕರಣದ ತನಿಖೆಗೆ ಒಂದು ವಾರ ತಡೆ ನೀಡಲಾಗಿದೆ. ಒಂದು ವಾರದ ನಿರ್ಬಂಧದಿಂದ ತನಿಖೆಯ ಮೇಲೆ ವ್ಯತ್ಯಾಸವೇನೂ ಆಗುವುದಿಲ್ಲ. 2010ರವರೆಗೂ ಮಠದ ವಿರುದ್ಧ ಅತ್ಯಾಚಾರ ದೂರುಗಳು ದಾಖಲಾಗಿದ್ದವು. ಆದರೆ ಇತ್ತೀಚೆಗೆ ಅಂತಹ ದೂರುಗಳು ದಾಖಲಾಗಿಲ್ಲ. ಹೀಗಾಗಿ ಪ್ರಸ್ತುತ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ. ನ್ಯಾಯಾಲಯದ ಮುಂದಿನ ಆದೇಶ ಪ್ರಕಟವಾಗುವವರೆಗೂ ಶ್ರೀಗಳನ್ನು ಬಂಧಿಸುವಂತಿಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಫಣೀಂದ್ರ ಅವರು ಹೇಳಿದ್ದಾರೆ. ಅಲ್ಲದೆ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಆದರೆ ಪ್ರಕರಣದ ಉಳಿದ ವಿಭಾಗಳ ಕುರಿತು ತನಿಖೆ ನಡೆಸಲು ಪೊಲೀಸರು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
ಮಠದ ಕಲಾವಿದರಾದ ಪ್ರೇಮಲತಾ ಮತ್ತು ಅವರ ಪತಿ ದಿವಾಕರ್ ಅವರು ಶ್ರೀಗಳಿಗೆ ಬ್ಲ್ಯಾಕ್ ಮಾಡಿದ್ದಾರೆ ಮತ್ತು ಇತರೆ ಕಲಾವಿದರು ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಮಠದ ಆಡಳಿತ ಮಂಡಳಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಹೊನ್ನಾವರ ಪೊಲೀಸರು ಪ್ರೇಮಲತಾ ಮತ್ತು ದಿವಾಕರ್ ದಂಪತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇತ್ತ ರಾಘವೇಶ್ವರ ಭಾರತಿ ಶ್ರೀಗಳ ವಿರುದ್ಧ ಪ್ರೇಮಲತಾ ಅವರ ಪುತ್ರಿ ಕೂಡ ಪ್ರತಿ ದೂರು ದಾಖಲಿಸಿದ್ದು, ರಾಘವೇಶ್ವರ ಭಾರತಿ ಶ್ರೀಗಳು ತಮ್ಮ ತಾಯಿ ಪ್ರೇಮಲತಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಳೆದ ಆಗಸ್ಟ್ 27ರಂದು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣವನ್ನು ಗಿರಿನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ಗಿರಿನಗರ ಪೊಲೀಸರು ಶ್ರೀಗಳನ್ನು ಬಂಧಿಸಲು ಮುಂದಾಗಿದ್ದರಾದರೂ ಭಕ್ತರ ಪ್ರತಿರೋಧದಿಂದಾಗಿ ಶ್ರೀಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಪೊಲೀಸರು ಶ್ರೀಗಳಿಗೆ ವಾರಂಟ್ ನೀಡಿ ವಾಪಸ್ಸಾಗಿದ್ದರು.