ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಭಾಷಾವಾರು ಮತ್ತೆ ಶುರು

ಕನ್ನಡನಾಡು ನುಡಿ ವಿಚಾರಕ್ಕೆ ಬಂದಾಗ ನಾವೆಲ್ಲರೂ ಒಂದೇ ಎಂಬುದು ಕನ್ನಡಿಗರ ಜಾಯಮಾನ. ಇದು ಹಲವಾರು ಕಾಲಘಟ್ಟಗಳಲ್ಲಿ ಪ್ರದರ್ಶಿತವಾಗುತ್ತಲೇ ಇದೆ.

Srinivasa Murthy VN
Updated On : 15 Sept 2014, 9:14 am

ಬೆಂಗಳೂರು: ಕನ್ನಡನಾಡು ನುಡಿ ವಿಚಾರಕ್ಕೆ ಬಂದಾಗ ನಾವೆಲ್ಲರೂ ಒಂದೇ ಎಂಬುದು ಕನ್ನಡಿಗರ ಜಾಯಮಾನ. ಇದು ಹಲವಾರು ಕಾಲಘಟ್ಟಗಳಲ್ಲಿ ಪ್ರದರ್ಶಿತವಾಗುತ್ತಲೇ ಇದೆ. ಇದೀಗ ಮತ್ತೊಮ್ಮೆ ಇದೇ ವಿಚಾರ ತಲೆ ಎತ್ತಿದೆ, ರಾಜ್ಯ ವಿಭಜಿಸಬೇಕು ಎನ್ನೋ ಕತ್ತಿ ಹೇಳಿಕೆ ಮತ್ತು ಹಿಂದಿ ಹೇರಬೇಕೆನ್ನುವ ಕೇಂದ್ರ ಸರ್ಕಾರದ ಸಂಚಿಗೆ ಕನ್ನಡಿಗರು ಎದೆಯುಬ್ಬಿಸಿಕೊಂಡೇ ಉತ್ತರ ನೀಡಿದ್ದಾರೆ.

ನಾಡನ್ನು ಒಡೆಯಲು ಬಂದರೆ ನಾವು ಸುಮ್ಮನಿರುವುದಿಲ್ಲ ಎಂಬ ಮಾತಿನ ಜೊತೆಯಲ್ಲೇ, ನಮ್ಮ ಮೇಲೇಕೆ ಸವಾರಿ ಎಂದು ಹಿಂದಿ ಭಾಷಾಭಿಮಾನಿಗಳನ್ನು ಸಾಹಿತಿಗಳು, ಚಿಂತಕರು, ರಾಜಕಾರಣಿಗಳಾದಿಯಾಗಿ ಎಲ್ಲರೂ ಪ್ರಶ್ನಿಸಿದ್ದಾರೆ.

ಕತ್ತಿ ಮಾತು ಮೊಂಡು

ಉಮೇಶ್ ಕತ್ತಿ ಪದೇ ಪದೇ ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡುತ್ತಾರೆ, ಇದು ಸರಿಯಲ್ಲ. ಉತ್ತರ ಕರ್ನಾಕವನ್ನು ಬೇರೆ ರಾಜ್ಯ ಮಾಡಬೇಕು ಎಂಬ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ (ಮೈಸೂರಿನಲ್ಲಿ)

ಹಿಂದಿಗೆ ವಿರೋಧ

ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಆದರೂ ಕೇಂದ್ರ ಹಿಂದಿಯನ್ನು ಹೇರಲು ಹೊರಟಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಬೇಕು. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ.
- ಚಂದ್ರಶೇಖರ ಪಾಟೀಲ, ಸಾಹಿತಿ(ಬೆಂಗಳೂರಿನಲ್ಲಿ)

ಕನ್ನಡಕ್ಕಾಗಿಯೇ ಹೊಸ ಪಕ್ಷ

ರಾಜ್ಯದಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಸಪ್ತಾಹವನ್ನು ನಿಲ್ಲಿಸಬೇಕು. ಹಿಂದಿ ಹೇರಿಕೆಯನ್ನು ಭಾಷಾವಾರು ರಾಜ್ಯಗಳು ವಿರೋಧಿಸಿ ದೆಹಲಿಯಲ್ಲಿ ಹೋರಾಟ ನಡೆಸಬೇಕು. ಕನ್ನಡಕ್ಕೂ ಸಾವಿರಾರು ವರ್ಷದ ಇತಿಹಾಸವಿದೆ. ಕನ್ನಡವನ್ನೇ ರಾಷ್ಟ್ರೀಯ ಭಾಷೆ ಮಾಡಲಿ. ಹಿಂದಿಯ ಸ್ಥಾನಮಾನವನ್ನು ಕನ್ನಡಕ್ಕೂ ನೀಡಲಿ. ಇದು ಕನ್ನಡಿಗರ ಹಕ್ಕೊತ್ತಾಯ. ಇಲ್ಲದಿದ್ದರೆ ಹೊರಾಟಕ್ಕಾಗಿಯೇ ನಾವೇ ಹೊಸ ಪಕ್ಷ ಕಟ್ಟುತ್ತೇವೆ.
- ಟಿಎ ನಾರಾಯಣಗೌಡ, ಕರವೇ ಅಧ್ಯಕ್ಷ (ಬೆಂಗಳೂರಿನಲ್ಲಿ)

ಒಡೆದು ಆಳುವ ನೀತಿ ಏಕೆ?

ಪ್ರತ್ಯೇಕ ರಾಜ್ಯದ ಕತ್ತಿ ಹೇಳಿಕೆ ಅವರ ವೈಯುಕ್ತಿಕ. ಕರ್ನಾಟಕ ರಾಜ್ಯ ಅಖಂಡವಾಗಿರಲಿ ಎಂಬುದೇ ನನ್ನ ಆಸೆ. ಕರ್ನಾಟಕ 2 ರಾಜ್ಯವಾಗುವುದು ಬೇಡ. ಅದಕ್ಕೆ ನಾನು ಒತ್ತು ನೀಡುವುದಿಲ್ಲ. ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವ ನೀತಿ ಅನುಸರಿಸಬಾರದು. ಉತ್ತರ ಕರ್ನಾಟಕ ಸಹ ದಕ್ಷಿಣಕರ್ನಾಟಕದಂತೆ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಉದ್ದೇಶ.
-ಜಾರಕಿಹೊಳಿ, ಅಬಕಾರಿ ಸಚಿವ (ಬಾಗಲಕೋಟೆಯಲ್ಲಿ)

ವಿಭಜನೆಯ ದುಸ್ಸಾಹಸ ಬೇಡ

ಕರ್ನಾಟಕದ ಏಕೀಕರಣದಲ್ಲಿ ಅನೇಕರ ಶ್ರಮ ಅಡಗಿದೆ. ಅದನ್ನು ವಿಭಜನೆ ಮಾಡುವ ದುಸ್ಸಾಹಸಕ್ಕೆ ಯಾರೂ ಕೈ ಹಾಕಬಾರದು. ಅದು ಒಳ್ಳೆಯದೂ ಅಲ್ಲ. ಉತ್ತರ ಕರ್ನಾಟಕದಲ್ಲಿ ಯಾವ ಕ್ಷೇತ್ರ ಹಿಂದೆ ಬಿದ್ದಿದೆ ಎಂಬುದನ್ನು ಅರಿತು ಅದರತ್ತ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ಯಾವುದರಲ್ಲಿ ಹಿಂದುಳಿದಿದೆ ಎಂಬುದನ್ನು ಅರಿತು ನೀರಾವರಿ, ಶಿಕ್ಷಣ ಇಲಾಖೆ ಸೇರಿದಂತೆ ಮತ್ತಿತ್ತರ ಇಲಾಖೆಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಿ ಆ ಮೂಲಕ ಉತ್ತರ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು.
-ಎಸ್.ಆರ್.ಪಾಟೀಲ್, ವಿಜ್ಞಾನ, ತಂತ್ರಜ್ಞಾನ ಸಚಿವ (ಬಾಗಲಕೋಟೆಯಲ್ಲಿ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement