ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯುವ ಭಾರತದ ಶಕ್ತಿಗೆ ನಮೋತ್ಸಾಹ

1.25 ಶತಕೋಟಿ ಭಾರತೀಯರ ಸಾಮರ್ಥ್ಯ, ಅಪರಿಮಿತ ಪ್ರತಿಭೆ ಬಳಸಿಕೊಳ್ಳುವ ಸ್ಪಷ್ಟ ಮಾರ್ಗ ಸೂಚಿ ನನ್ನಲಿದೆ

Srinivasa Murthy VN
Updated On : 22 Sept 2014, 9:30 am

ಭಾರತ ಮತ್ತೆ ಮೇಲೇಳಲಿದೆ. ಅದಕ್ಕೆ ಮಾರ್ಗ ಸೂಚಿ ನನ್ನಲ್ಲಿದೆ. ಭಾರತೀಯ ಸಾಮರ್ಥ್ಯದ ಬಗ್ಗೆ ನಂಬಿಕೆಯಿದೆ. ಪ್ರಜಾಪ್ರಭುತ್ವವು ನಮ್ಮ ಹಿರೀಕರ ಅತ್ಯುನ್ನತ ಕೊಡುಗೆ. ನಾನು ಭಾರತೀಯರ ಆತ್ಮವಿಶ್ವಾಸವನ್ನು ಜಯಿಸಿದ್ದೇ ಆದರೆ, ಆಗ 1.25 ಶತಕೋಟಿ ಭಾರತೀಯರ ಶಕ್ತಿಯೆಲ್ಲಾ ಒಂದಾಗಿ ದೇಶವನ್ನು ಮುನ್ನಡೆಸುತ್ತದೆ...

ಇದು ನಮ್ಮ ಪ್ರಧಾನಿ ನರೇಂದ್ರ ಮೋದಿ ಬಾಯಿಯಿಂದ ಉದುರಿದ ನುಡಿಮುತ್ತುಗಳು. ಪ್ರಧಾನಿಯಾದ ಬಳಿಕ ಸಿಎನ್‌ಎನ್‌ಗೆ ನೀಡಿದ ಮೊದಲ ಸಂದರ್ಶನದಲ್ಲಿ ಮೋದಿಯವರು ತಮ್ಮ ಮನಸ್ಸಿನ ಭಾವನೆಗಳಿಗೆ ಮಾತಿನ ರೂಪ ನೀಡಿದ್ದಾರೆ. ಪತ್ರಕರ್ತ ಫರೀದ್ ಝಕಾರಿಯಾ ಅವರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ನೀಡಿರುವ ಉತ್ತರದ ಪೂರ್ಣಪಾಠ ಇಲ್ಲಿದೆ.

ಚೀನಾ-ಭಾರತ ಬಾಂಧವ್ಯ
ಭಾರತವು ಮುಂದಿನ ಚೀನಾವಾಗಿ ಬೆಳೆಯಲಿದೆಯೇ, ದೇಶದ ವಾರ್ಷಿಕ ಪ್ರಗತಿ ಶೇ.8-9 ತಲುಪಲಿದೆಯೇ?

-ನೋಡಿ, ಭಾರತ ಏನೂ ಆಗಬೇಕಾಗಿಲ್ಲ. ಅದು ಭಾರತವಾಗಿಯೇ ಉಳಿಯಬೇಕು., ಬೆಳೆಯಬೇಕು. ಒಂದು ಕಾಲದಲ್ಲಿ ಚಿನ್ನದ ಹಕ್ಕಿ ಎಂದು ಕರೆಯಲಾಗುತ್ತಿದ್ದ ದೇಶ ನಮ್ಮದು. ಆದರೆ ನಾವು ಹಿಂದೆ ಯಾವ ಸ್ಥಿತಿಯಲ್ಲಿದ್ದೆವೋ ಅಲ್ಲಿಂದ ಕೆಳಕ್ಕೆ ಬಿದ್ದಿದ್ದೇವೆ. ಆದರೆ ನಮಗೆ ಇದೀಗ ಮತ್ತೆ ಎದ್ದೇಳುವ ಅವಕಾಶ ಲಭಿಸಿದೆ. ಕಳೆದ 5 ಅಥವಾ 10 ಶತಮಾನಗಳ ವಿವರಗಳನ್ನು ತೆಗೆದುನೋಡಿ, ಭಾರತ ಮತ್ತು ಚೀನಾ ಸಮಾನ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವುದು ನಿಮಗೆ ಕಾಣುತ್ತದೆ. ಜಾಗತಿಕ ಜಿಡಿಪಿಗೆ ಈ ಎರಡೂ ರಾಷ್ಟ್ರಗಳ ಕೊಡುಗೆ ಸಮಾನವಾಗಿ ಹೆಚ್ಚಿದೆ, ಅಂತೆಯೇ ಸಮಾನವಾಗಿ ಕಡಿಮೆಯೂ ಆಗಿದೆ. ಈ ಯುಗವು ಮತ್ತೆ ಏಷ್ಯಾದ ಮಡಿಲಲ್ಲಿದೆ. ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಶೀಘ್ರಗತಿಯಲ್ಲಿ ಒಟ್ಟೊಟ್ಟಿಗೆ ಬೆಳವಣಿಗೆ ಹೊಂದುತ್ತಿದೆ.

ಚೀನಾವು ಸತತ 30 ವರ್ಷಗಳಲ್ಲಿ ಗಳಿಸಿದ ಶೇ.8-9ರ ಪ್ರಗತಿಯನ್ನು ಹೊಂದಲು ಭಾರತಕ್ಕೆ ಸಾಧ್ಯವೇ ಎಂದು ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ನನಗೆ ನಂಬಿಕೆ ಇದೆ. ಭಾರತೀಯರಲ್ಲಿ ಅಪರಿಮಿತ ಪ್ರತಿಭೆಯಿದೆ. ನಮ್ಮ ಸಾಮರ್ಥ್ಯಗಳ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ. ಭಾರತದ 1.25ಶತಕೋಟಿ ಜನರ ಉಧ್ಯಮಶೀಲ ಸ್ವಭಾವದ ಮೇಲೆ ಸಂಪೂರ್ಣ ವಿಶ್ವಾಸ ನನಗಿದೆ. ಅವರಲ್ಲಿರುವ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸ್ಪಷ್ಟ ಮಾರ್ಗಸೂಚಿ ನನ್ನಲ್ಲಿದೆ.

ಪೂರ್ವ ಚೀನಾ ಸಮುದ್ರದಲ್ಲಿ, ದಕ್ಷಿಣ ಚೀನಾ ಸಮುದ್ರದಲ್ಲಿನ ಚೀನಾದ ವರ್ತನೆ ಬಗ್ಗೆ ನಿಮಗೆ ಆತಂಕವಿಲ್ಲವೇ?
-ಭಾರತ ವಿಭಿನ್ನ ದೇಶ 1.25ಶತಕೋಟಿ ಜನಸಂಖ್ಯೆಯಿರುವ ದೇಶ ನಮ್ಮದು. ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಆತಂಕ ಪಟ್ಟರೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಅಂದ ಮಾತ್ರಕ್ಕೆ, ನಾವು ಸಮಸ್ಯೆಗಳು ಎದುರಾದಾಗ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕು ಎಂದು ಅರ್ಥವಲ್ಲ. ನಾವು 18ನೇ ಶತಮಾನದಲ್ಲಿ ಜೀವಿಸುತ್ತಿಲ್ಲ. ಚೀನಾ ಕೂಡ ಪುರಾತನ ಸಂಸ್ಕೃತಿ ಪರಂಪರೆ ಹೊಂದಿದೆ. ಅವರು ಆರ್ಥಿಕ ಅಭಿವೃದ್ಧಿಯನ್ನು ಹೇಗೆ ಕೇಂದ್ರೀಕರಿಸಿದ್ದಾರೆ ನೋಡಿ. ಏಕಾಂಗಿಯಾಗಿಲು ಬಯಸುವ ರಾಷ್ಟ್ರ ಹೀಗೆ ಮಾಡುವುದಿಲ್ಲ. ಹಾಗಾಗಿ ಚೀನಾ ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ ಎಂದರ್ಥ. ಇದೇ ಕಾರಣಕ್ಕಾಗಿ ನಾವು ಚೀನಾದ ಮೇಲೆ ನಂಬಿಕೆ ಇಡೋಣ. ಅದು ಜಾಗತಿಕ ಕಾನೂನನ್ನು ಪಾಲಿಸಿ ಸಹಕಾರದಿಂದ ಮುನ್ನಡೆಯಲಿದೆ ಎಂಬ ವಿಶ್ವಾಸ ಹೊಂದೋಣ.

ಚೀನಾ ಆ ಪರಿ ಅಭಿವೃದ್ಧಿ ಹೊಂದಲು ಅದರ ನಿರಂಕುಶ ಸರ್ಕಾರದಿಂದ ಸಾಧ್ಯವಾಯಿತೇ?
ನಿಮಗೆ ಚೀನಾ ಒಂದು ಉದಾಹರಣೆಯಾದರೆ, ಪ್ರಜಾ ಪ್ರಭುತ್ವ ರಾಷ್ಟ್ರಗಳು ಮತ್ತೊಂದು ಉದಾಹರಣೆಯಾಗಬಲ್ಲದು. ಏಕೆಂದರೆ ಅವುಗಳೂ ಭಾರಿ ಅಭಿವೃದ್ಧಿಯನ್ನು ಸಾಧಿಸಿವೆ. ಪ್ರಜಾಪ್ರಭುತ್ವವಿರುವ ಕಾರಣ ಪ್ರಗತಿ ಅಸಾಧ್ಯ ಎಂದು ನೀವು ಹೇಳಬಾರದು. ಪ್ರಜಾಪ್ರಭುತ್ವವೆಂಬುದು ನಮ್ಮ ಬದ್ಧತೆ. ಅದು ನಮ್ಮ ಹಿರೀಕರ ಅತ್ಯುನ್ನತ ಕೊಡುಗೆ. ಸುಲಭವಾಗಿ ರಾಜಿ ಮಾಡಿಕೊಳ್ಳಲಾಗದ ಪರಂಪರೆ. ಪ್ರಜಾಪ್ರಭುತ್ವವೆಂಬುದು ನಮ್ಮ ಡಿಎನ್‌ಎಯಲ್ಲೇ ಇದೆ. ನೋಡಿ ನಾನು ಪ್ರಜಾಪ್ರಭುತ್ವ ಶಕ್ತಿಯನ್ನು ನೋಡಿದ್ದೇನೆ. ಪ್ರಜಾ ಪ್ರಭುತ್ವವೆಂಬುದು ಇಲ್ಲದಿದ್ದರೆ, ನನ್ನಂತಹ ಬಡಕುಟುಂಬದಿಂದ ಬಂದ ವ್ಯಕ್ತಿ, ಮೋದಿ ಈ ಸ್ಥಾನದಲ್ಲಿ ಕುಳಿತುಕೊಳ್ಳಲು ಹೇಗೆ ಸಾಧ್ಯವಾಗುತ್ತಿತ್ತು? ಇದುವೇ ಪ್ರಜಾಪ್ರಭುತ್ವದ ಶಕ್ತಿ.

ಮಹಿಳೆಯ ಮೇಲಿನ ದೌರ್ಜನ್ಯ
ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ಏನು ಮಾಡಬಹುದು?
-ನೋಡಿ ನಾವು ಅಂದರೆ ರಾಜಕೀಯ ಪಂಡಿತರು ಈ ಸಮಸ್ಯೆಯ ಮೂಲ ಹುಡುಕುತ್ತಾ ಹೋಗಿ ನಾವೇ ಹಗ್ಗದಿಂದ ಕಟ್ಟಿಕೊಂಡಂತಾಗಬಾರದು. ಹೆಚ್ಚಿನ ಸಮಸ್ಯೆ ಉದ್ಭವಿಸುವುದೇ ರಾಜಕೀಯ ಪಂಡಿತರ ಹೇಳಿಕೆಗಳಿಂದ. ಮಹಿಳೆಯರ ಘನತೆ ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿ. ಈ ವಿಚಾರದಲ್ಲಿ ರಾಜಿಯೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸವೆತ ಇರಲೇಬಾರದು. ಮಹಿಳೆಯರಿಗೆ ಗೌರವ ನೀಡುವ. ಆಕೆಯನ್ನು ಸಮಾನವಾಗಿ ಕಾಣುವ ಹಾಗೂ ಘನತೆಯನ್ನು ಕಾಪಾಡುವಂತಹ ಕೌಟುಂಬಿಕ ಸಂಸ್ಕೃತಿಯನ್ನು ನಾವು ಪುನರ್ ಸ್ಥಾಪಿಸಬೇಕು. ಇಲ್ಲಿ ಮುಖ್ಯವಾದದ್ದು ಹೆಣ್ಣು ಮಗುವಿನ ಶಿಕ್ಷಣ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಸಬಲೀಕರಣದ ಸಾಧ್ಯತೆ ಹೆಚ್ಚಾಗುತ್ತದೆ. ಆ.15ರಂದು ನನ್ನ ಸರ್ಕಾರ ಈ ನಿಟ್ಟಿನಲ್ಲಿ ಹೊಸ ಚಳವಳಿ ಆರಂಭಿಸಿದೆ. ಅದರ ಹೆಸರು ಹೆಣ್ಣಿಗೆ ಶಿಕ್ಷಣ ನೀಡಿ, ಹೆಣ್ಣನ್ನು ರಕ್ಷಿಸಿ.

ನಾನು ಕೆಲಸ ಮಾಡದೇ ಇರುವ ಜಾಯಮಾನದವನಲ್ಲ. ನನಗೆ ಕೆಲಸ ಮಾಡುವುದರಲ್ಲೇ ಖುಷಿ ಸಿಗುತ್ತದೆ. ಕೆಲಸ ನನಗೆ ರಿಲ್ಯಾಕ್ಸೇಷನ್ ಅನ್ನೂ ನೀಡುತ್ತದೆ. ಪ್ರತಿ ಕ್ಷಣವೂ ನಾನು ಹೊಸತನ್ನು ಯೋಚಿಸುತ್ತಿರುತ್ತೇನೆ.
-ಪ್ರಧಾನಿ ನರೇಂದ್ರ ಮೋದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement