ನವದೆಹಲಿ: ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ನೇತತ್ವದ ಅಂದಿನ ಕೇಂದ್ರ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಹಾಗೂ ಅವರ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ಗೂಢಚಾರಿಕೆ ಮಾಡಿತ್ತು ಎನ್ನುವ ಅಂಶ ಗುಪ್ತಚರ ಇಲಾಖೆಯ ರಹಸ್ಯ ದಾಖಲೆಯ ಅಂಶಗಳಿಂದ ಬಹಿರಂಗವಾಗಿದೆ ಎಂದು ಹೇಳಲಾಗುತ್ತಿದೆ.
ಖಾಸಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆಯ ನಂತರ 1948ರಿಂದ 1968ರವರೆಗೆ ಅಂದಿನ ಜವಾಹರಲಾಲ್ ನೆಹರು ನೇತೃತ್ವದ ಕೇಂದ್ರ ಸರ್ಕಾರ, ಬೋಸ್ ಕುಟುಂಬದ ಮೇಲೆ ಸತತ 20 ವರ್ಷಗಳ ಕಾಲ ಗೂಢಾಚಾರಿಕೆ ನಡೆಸಿ ಮಾಹಿತಿ ಸಂಗ್ರಹಿಸಿತ್ತು ಎಂದು ಹೇಳಲಾಗುತ್ತಿದೆ.
ಸುಭಾಶ್ ಚಂದ್ರ ಬೋಸ್ ಅವರ ಅಣ್ಣ ಶರತ್ ಚಂದ್ರ ಬೋಸ್ ಮತ್ತು ಅವರ ಮಕ್ಕಳ ಮೇಲೆ ನೆಹರು ಸರ್ಕಾರದ ಇನ್ಫರ್ಮೆಷನ್ ಬ್ಯೂರೋ ಸತತವಾಗಿ ಗೂಢಚಾರಿಕೆ ನಡೆಸಿತ್ತು. ಬೋಸ್ ಪತ್ನಿ ಎಮಿಲಿ ಬೋಸ್ ಅಣ್ಣನ ಮಕ್ಕಳಿಗೆ ಬರೆಯುತ್ತಿದ್ದ ಪತ್ರ ಸೇರಿದಂತೆ ಅವರ ಪ್ರತಿಯೊಂದು ಚಲನವಲನಗಳ ವರದಿಯನ್ನು ಐಬಿ ನೆಹರು ಅವರಿಗೆ ಒಪ್ಪಿಸುತ್ತಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಈ ವಿಚಾರ ಇದೀಗ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಸ್ ಕುಟುಂಬದ ಸದಸ್ಯರು, ಬೋಸ್ ಸಂಬಂಧಿಕರ ಮೇಲೆ ನೆಹರು ಸರ್ಕಾರ ನಡೆಸಿದ ಗೂಢಚಾರಿಕೆಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳ ವಿವರವನ್ನು ಪೂರ್ಣವಾಗಿ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. "ಗೂಢಚಾರಿಕೆ ಪ್ರಕರಣ ಸಂಬಂಧ ಕೂಡಲೇ ನ್ಯಾಯಾಂಗ ವಿಚಾರಣೆ ನಡೆಯಬೇಕು. ಈ ಪ್ರಕರಣ ನಿಜಕ್ಕೂ ನಮ್ಮ ಕುಟುಂಬಕ್ಕೆ ಆಘಾತ ನೀಡಿದ್ದು, ತಮ್ಮ ಕುಟುಂಬ ನೆಹರು ಕುಟುಂಬಕ್ಕೆ ತುಂಬಾ ಹತ್ತಿರವಾಗಿತ್ತು. ನೆಹರೂ ಅವರು ಆಗಾಗ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ನಮ್ಮ ಕಷ್ಟ ಸುಖಗಳನ್ನು ಆಲಿಸುತ್ತಿದ್ದರು. ಹೀಗಿದ್ದು ಗೂಢಚಾರಿಕೆ ನಡೆಸುವ ಅವಶ್ಯಕತೆ ಏನಿತ್ತು. ನಾವು ಇದನ್ನು ನಿರೀಕ್ಷಿಸರಿಲಿಲ್ಲ ಎಂದು ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಆಶ್ಚರ್ಯವ್ಯಕ್ತಪಡಿಸಿದ್ದಾರೆ.
ಅಲ್ಲದೆ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಚಂದ್ರಕುಮಾರ್ ಅವರು, ಪ್ರಧಾನಿ ಮೋದಿ ಅವರು ತಮ್ಮದು ಪಾರದರ್ಶಕ ಆಡಳಿತ ಎಂದು ಹೇಳುತ್ತಾರೆ. ಅವರಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಪ್ರಸ್ತುತ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಮೂಲಕ ತಮ್ಮದು ಪಾರದರ್ಶಕ ಆಡಳಿತ ಎಂದು ಸಾಬೀತು ಪಡಿಸಲಿ ಎಂದು ಹೇಳಿದ್ದಾರೆ.
ನೇತಾಜಿ ಪುತ್ರಿ ಅನಿತಾ ಬೋಸ್ ಅವರು ಕೂಡ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ನಮ್ಮ ಕುಟುಂಬದ ಮೇಲೆ ಯಾವ ನಿಲುವು ಹೊಂದಿತ್ತು ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಅಣ್ಣ ಮತ್ತು ಮಕ್ಕಳ ಮೇಲೆ ಗೂಢಚಾರಿಕೆ ನಡೆಸಿರುವುದು ಆಘಾತಕಾರಿ ವಿಷಯ ಎಂದು ಅವರು ಹೇಳಿದ್ದಾರೆ. ಇನ್ನು ಇದೇ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಜೆಡಿಯು ಮುಖ್ಯಸ್ಥ ಕೆಸಿ ತ್ಯಾಗಿ, ವರದಿಗಳು ಬಹಿರಂಗವಾಗಿರುವುದು ದುರದೃಷ್ಟಕರ. ಇದನ್ನು ನಂಬುವುದು ಕೊಂಚ ಕಷ್ಟವಾದರೂ ಇದೇ ಸತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.