ಪ್ರಧಾನ ಸುದ್ದಿ

ಚಾರ್ಲಿ ಹೆಬ್ಡೊ ಕಲಾವಿದ ಇನ್ನು ಮುಂದೆ ಮೊಹಮ್ಮದ್ ಕಾರ್ಟೂನ್ ಬಿಡಿಸುವುದಿಲ್ಲ

Guruprasad Narayana

ಲಂಡನ್: ಫ್ರೆಂಚ್ ವಿಡಂಬನಾ ವಾರಪತ್ರಿಕ ಚಾರ್ಲಿ ಹೆಬ್ಡೊ ಮುಖಪುಟ ವಿನ್ಯಾಸಕ್ಕೆ ನೇಮಕಗೊಂಡಿರುವ ಕಲಾವಿದ ಇನ್ನು ಮುಂದೆ ಪ್ರವಾದಿ ಮೊಹಮದ್ದನ ವ್ಯಂಗ್ಯ ಚಿತ್ರ ಬಿಡಿಸುವುದಿಲ್ಲ ಎಂದು ಹೇಳಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಇಬ್ಬರು ಇಸ್ಲಾಮಿಕ್ ತೀವ್ರವಾದಿಗಳು ಜನವರಿ ೭ ರಂದು ಈ ಪತ್ರಿಕೆಯ ಕಚೇರಿಯ ಮೇಲೆ ನಡೆಸಿದ ದಾಳಿಯಿಂದ ಮುಖ್ಯ ಸಂಪಾದಕನೂ ಸೇರಿದಂತೆ ೧೨ ಜನರು ಮೃತರಾಗಿದ್ದರು.

ಮೊಹಮದ್ ಚಿತ್ರ ಬರೆಯಲು ನನಗೆ ಇನ್ನು ಮುಂದೆ ಆಸಕ್ತಿಯಿಲ್ಲ ಎಂದು ಮುಖ್ಯ ಕಲಾವಿದ ರೆನಾಲ್ಡ್ ಲೂಜಿಯರ್ 'ಇನ್ ರಾಕ್ಸ್' ಪತ್ರಿಕೆಗೆ ತಿಳಿಸಿದ್ದಾರೆ.

ಈ ದಾಳಿ ನಡೆದ ಕೆಲವೇ ದಿನಗಳಲ್ಲಿ ಬದುಕುಳಿದಿದ್ದ ಸಿಬ್ಬಂದಿ ಪತ್ರಿಕೆಯನ್ನು ಹೊರತಂದು ಮುಖಪುಟದ ಮೇಲೆ ಪ್ರವಾದಿ ಮೊಹಮ್ಮದ್ ಚಿತ್ರ ಬಿಡಿಸಿ "ಎಲ್ಲವನ್ನು ಕ್ಷಮಿಸಲಾಗಿದೆ" ಮತ್ತು "ನಾನು ಚಾರ್ಲಿ" ಎಂದು ಹೇಳುತ್ತಿರುವಂತೆ ಬಿಂಬಿಸಲಾಗಿತ್ತು.

"ನನಗೆ ಮೊಹಮ್ಮದ್ ಚಿತ್ರ ಬರೆದು ಸಾಕಾಗಿದೆ. ಇದು ಸರ್ಕೋಜಿ ಚಿತ್ರ ಬರೆದು ಬರೆದು ಬೇಜಾರಾಗಿರುವಂತೆಯೆ. ಇನ್ನು ಮುಂದೆ ಅವರುಗಳನ್ನು ಬರೆದು ನನ್ನ ಜೀವನ ವ್ಯಯಿಸುವುದಿಲ್ಲ" ಎಂದು ಲುಜ್ ಹೇಳಿದ್ದಾರೆ.

ಕಾರ್ಟೂನ್ ಗಳನ್ನು ಒಳಗೊಂಡ 'ಕೆಥಾರ್ಸಿಸ್' ಎಂಬ ಹೆಸರಿನ ಪುಸ್ತಕವನ್ನು ಲುಜ್ ಬಿಡುಗಡೆ ಮಾಡಲಿದ್ದು ತನ್ನ ಸಹದ್ಯೋಗಿಗಳನ್ನು ಹತ್ಯೆಗೈದ ಕಥೆಯನ್ನು ಅದರಲ್ಲಿ ಹೇಳಲಿದ್ದೇನೆ ಎಂದಿದ್ದಾರೆ.

ಜನವರಿ ದಾಳಿಯ ನಂತರ ಚಾರ್ಲಿ ಹೆಬ್ಡೊ ಪ್ರಸರಣ ೬೦ ಸಾವಿರದಿಂದ ೮೦ ಲಕ್ಷಕ್ಕೆ ಏರಿದೆ. ಸೆಪ್ಟಂಬರ್ ನಲ್ಲಿ ಈ ಪತ್ರಿಕೆಯ ಹೊಸ ವಿನ್ಯಾಸ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

SCROLL FOR NEXT