ನವದೆಹಲಿ: ಯೋಗ ಗುರು ರಾಮ್ ದೇವ್ ಅವರ ದಿವ್ಯ ಫಾರ್ಮಸಿ ಮಾರಾಟ ಮಾಡುವ "ದಿವ್ಯ ಪುತ್ರಜೀವಕ್ ಬೀಜ" ಔಷಧಿ ರಾಜ್ಯಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ.
ಜನತಾದಳ ಸಂಯುಕ್ತ ಪಕ್ಷದ ಕೆ ಸಿ ತ್ಯಾಗಿ ಅವರು ದಿವ್ಯಾ ಫಾರ್ಮಸಿ ಗಂಡು ಮಗು ಸಂತಾನವನ್ನು ಭರವಸೆ ನೀಡುವ ಔಷಧಿಯನ್ನು ಮಾರುತ್ತಿದೆ ಎಂದು ಆರೋಪಿಸಿದ್ದಾರೆ.
ಇಂತಹ ಔಷದವನ್ನು ಮಾರುವ ಯೋಗ ಗುರು ರಾಮದೇವ್ ಅವರನ್ನು ಹರ್ಯಾಣ ಸರ್ಕಾರ "ಭೇಟಿ ಬಚಾವೋ" ಆಂದೋಲನಕ್ಕೆ ರಾಯಭಾರಿಯನ್ನಾಗಿ ಮಾಡಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ ವಿಪಕ್ಷದ ಹಲವು ಸದಸ್ಯರು ದಿವ್ಯಾ ಫಾರ್ಮಸಿಯ ವಿರುದ್ಧ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಈ ಔಷಧಿಯನ್ನು ನಿಷೇಧಿಸುವಂತೆ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಆಗ್ರಹಿಸಿದ್ದಾರೆ.
ಇಂತಹ ಔಷಧಗಳು ಗೊಡ್ಡು ಸಂಪ್ರದಾಯವನ್ನು ಮೆರೆವುದಲ್ಲದೆ, ವೈಜ್ಞಾನಿಕ ಮನೋಧರ್ಮಕ್ಕೆ ವಿರುದ್ಧ ಎಂದು ಸಿಪಿಐ ಪಕ್ಷದ ಸೀತಾರಾಂ ಯೆಚೂರಿ ಹೇಳಿದ್ದಾರೆ. ತನಿಖೆ ನಡೆಯುವವರೆಗೆ ಈ ಔಷದಿ ಮಾರಾಟಕ್ಕೆ ನೀಡಿರುವ ಪರವಾನಗಿ ರದ್ದುಮಾಡುವಂತೆ ಕಾಂಗ್ರೆಸ್ ಪಕ್ಷದ ಗುಲಾಂ ನಬಿ ಆಜಾದ್ ಆಗ್ರಹಿಸಿದ್ದಾರೆ.