ಪ್ರಧಾನ ಸುದ್ದಿ

ಪಾಕಿಸ್ತಾನ ಶೆಲ್ ದಾಳಿ; ಮೂವರು ನಾಗರಿಕರ ಸಾವು; ೨೦ ಜನಕ್ಕೆ ಗಾಯ

Guruprasad Narayana

ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶನಿವಾರ ಭಾರತದ ಸ್ವಾತಂತ್ರ್ಯ ದಿನಾಚರಣೆಯಾದ ಇಂದು ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಶೆಲ್ ದಾಳಿ ನಡೆಸಿದ್ದು ಮೂವರು ನಾಗರಿಕರು ಮೃತಪಟ್ಟು ೨೦ ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಮೆಂಧಾರ್ ಸೆಕ್ಟರ್ ನಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಿಂದ ಮೂವರು ನಾಗರಿಕರು ಮೃತಪಟ್ಟಿದ್ದು, ೨೦ ಜನ ಗಾಯಗೊಂಡಿದ್ದಾರೆ" ಎಂದು ಜಮ್ಮು ವಿಭಾಗದ ಕಮಿಷನರ್ ಪವನ್ ಕೊತ್ವಾಲ್ ತಿಳಿಸಿದ್ದಾರೆ.

"ಗಾಯಗೊಂಡವರನ್ನು ಜಮ್ಮು ನಗರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸೇರಿಸಲು ನಾವು ಹೆಲಿಕ್ಯಾಪ್ಟರ್ ಗಳನ್ನು ಕಳುಹಿಸಿದ್ದೇವೆ ಮತ್ತು ತುರ್ತು ನಿಗಾ ಘಟಕವನ್ನು ಗಾಯಗೊಂಡವರನ್ನು ಸ್ವೀಕರಿಸಲು ಎಚ್ಚರಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.

ಪೂಂಚ್ ಜಿಲ್ಲೆಯ ಮೆಂಧರ್, ಸೌಜಿಯಾನ್ ಮತ್ತು ಮಂಡಿ ಸೆಕ್ಟರ್ ಗಳ ಗಡಿ ನಿಯಂತ್ರಣಾ ರೇಖೆಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಪಾಕಿಸ್ತಾನ ಅಪ್ರಚೋದಿತ ಶೆಲ್ ದಾಳಿ ನಡೆಸಿದೆ. ಈ ಪ್ರದೇಶಗಳಲ್ಲಿ ಭಾರತೀಯ ಸೇನೆ ಸೂಕ್ತ ಉತ್ತರ ನೀಡಿದೆ ಎಂದು ಸೇನೆಯ ವಕ್ತಾರ ಮನೀಶ್ ಮೆಹ್ತಾ ತಿಳಿಸಿದ್ದಾರೆ.

"ಅವರು (ಪಾಕಿಸ್ತಾನ) ಈ ದಾಳಿಗೆ ೮೨ ಎಂ ಎಂ ಮಾರ್ಟರ್ ಗಳನ್ನು ಬಳಸಿದ್ದಾರೆ. ಬೆಳಗ್ಗೆ ಮೂರು ಘಂಟೆಯಿಂದಲೇ ಕದನ ವಿರಾಮ ಉಲ್ಲಂಘಿಸಿ ಶೆಲ್ ದಾಳಿ ನಡೆಸಿದ್ದು ಸುಮಾರು ೭:೩೦ ರ ಹೊತ್ತಿಗೆ ಈ ದಾಳಿ ನಿಂತಿದೆ" ಎಂದು ಅವರು ತಿಳಿಸಿದ್ದಾರೆ.

SCROLL FOR NEXT