ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾನದ ಹಿಂದಿನ ದಿನ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದ ಆರೋಪದ ಮೇರೆ ಜೆಪಿಪಾರ್ಕ್ ವಾರ್ಡ್ ನ ಜೆಡಿಎಸ್ ಅಭ್ಯರ್ಥಿ ವರಲಕ್ಷ್ಮಿ ಅವರ ಪತಿ ಗಂಗಣ್ಣ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೆ.ಪಿ.ಪಾರ್ಕ್ ವಾರ್ಡ್ ನಂ 17ರ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವರಲಕ್ಷ್ಮೀ ಗಂಗಣ್ಣ ಅವರ ಪತಿ ಗಂಗಣ್ಣ ಅವರನ್ನು ಪೊಲೀಸರು ರಾತ್ರಿ 1 ಗಂಟೆ ಸುಮಾರಿಗೆ ಬಂಧಿಸಿದ್ದಾರೆ. ಹಣ ಹಂಚುತ್ತಿದ್ದ ಕುರಿತು ಮಾಹಿತಿ ಪಡೆದ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಶುಕ್ರವಾರ ತಡರಾತ್ರಿ 1 ಗಂಟೆಯ ಸುಮಾರಿನಲ್ಲಿ ಹಣ ಹಂಚುತ್ತಿದ್ದರು ಎಂದು ಆರೋಪಿಸಲಾಗಿದೆ. ಮೂಲಗಳ ಪ್ರಕಾರ ಗಂಗಣ್ಣ ಅವರು ಮತದಾರರಿಗೆ ಸುಮಾರು 1 ಲಕ್ಷ ಹಣ ಹಂಚಿಕೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.
ರೌಡಿ ಶೀಟರ್ ಗಳಿಂದ ಮತದಾರರ ಮೇಲೆ ಒತ್ತಡ ಆರೋಪ
ಇನ್ನು ಯಲಹಂಕದಲ್ಲಿ ರೌಡಿಶೀಟರ್ ಗಳು ಮತದಾರರ ಮೇಲೆ ಒತ್ತಡ ಹೇರುತ್ತಿರುವ ಕುರಿತು ಮಾಹಿತಿಗಳು ಕೇಳಿಬಂದಿದೆ. ಯಲಹಂಕ ಉಪನಗರ ವಾರ್ಡ್ ನಂಬರ್ 4ರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಮತಗಟ್ಟೆ ನಂಬರ್ 30 ರ ಬಳಿ ಆ ಕ್ಷೇತ್ರದ ಮತದಾರನಲ್ಲದ ವ್ಯಕ್ತಿಯೊಬ್ಬ ಮತದಾರರ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಬಿಜೆಪಿ ಶಾಸಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕ ಕ್ಷೇತ್ರದ ಶಾಸಕ ವಿಶ್ವನಾಥ್ ಬೆಂಬಲಿಗರು ಆತನ ಮೇಲೆ ಹಲ್ಲೆ ನಡೆಸಿರುವ ಕುರಿತು ಆರೋಪಗಳು ಕೇಳಿಬಂದಿವೆ. ಘಟನೆ ಕುರಿತಂತೆ ಶಾಸಕ ವಿಶ್ವನಾಥ್ ಅವರು ಗರಂ ಆಗಿದ್ದು, ಈ ಘಟನೆಯ ಕುರಿತು ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದಾರೆ.