ಭೂಗತ ಪಾತಕಿ ದಾವೂದ್ ಇಬ್ರಾಹಿಂ (ಸಂಗ್ರಹ ಚಿತ್ರ) 
ಪ್ರಧಾನ ಸುದ್ದಿ

ಪಾಕ್‍ನಲ್ಲಿರುವ ದಾವೂದ್ ಫೋಟೋ, ವಿಳಾಸ ಬಿಡುಗಡೆ ಮಾಡಿದ ಭಾರತ

`ಭೂಗತ ದೊರೆ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿಲ್ಲ' ಎನ್ನುವ ಪಾಕಿಸ್ತಾನಕ್ಕೆ ಭಾರತ ಶನಿವಾರ ಹೊಸ ಶಾಕ್ ನೀಡಿದೆ.

ನವದೆಹಲಿ: `ಭೂಗತ ದೊರೆ ದಾವೂದ್ ಇಬ್ರಾಹಿಂ ನಮ್ಮ ದೇಶದಲ್ಲಿಲ್ಲ' ಎನ್ನುವ ಪಾಕಿಸ್ತಾನಕ್ಕೆ ಭಾರತ ಶನಿವಾರ ಹೊಸ ಶಾಕ್ ನೀಡಿದೆ.

ಆತನ ಕುಟುಂಬ, ಸಹವರ್ತಿಗಳು ಯಾವಾಗ ದುಬೈಗೆ ಪ್ರಯಾಣಿಸಿದ್ದರು? ದಾವೂದ್ ಎಲ್ಲೆಲ್ಲಿ ಎಷ್ಟೆಷ್ಟು ಆಸ್ತಿ, ಮನೆ ಹೊಂದಿದ್ದಾನೆ ಎನ್ನುವ ದಾಖಲೆಗಳನ್ನು ಉದ್ದೇಶ ಪೂರ್ವಕವಾಗಿ ಬಹಿರಂಗಪಡಿಸಿದೆ. ಈ ಮೂಲಕ ಭಾರತದಲ್ಲಿ ಪರೋಕ್ಷ ಯುದ್ಧಕ್ಕೆ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ನಿಜಬಣ್ಣ ಮತ್ತೊಮ್ಮೆ ಜಗತ್ತಿನ ಮುಂದೆ ಬಯಲು ಮಾಡಿದೆ.

ಹಲವು ವರ್ಷಗಳಿಂದ ಭೂಗತದೊರೆ ಬೆನ್ನ ಹಿಂದೆ ಬಿದ್ದಿರುವ ಗುಪ್ತಚರ ಸಂಸ್ಥೆ ದಾವೂದ್ ಪತ್ನಿ, ಮಕ್ಕಳು, ಮೊಮ್ಮಕ್ಕಳು ಓಡಾಡಿದ ವಿಮಾನ, ಅವರ ಪಾಸ್ ಪೋರ್ಟ್ ಸಂಖ್ಯೆ ಸೇರಿ ಆತನ  ಕುಟುಂಬಕ್ಕೆ ಸಂಬಂಧಿಸಿ ದ ಪ್ರತಿಯೊಂದು ಮಾಹಿತಿಯನ್ನೂ ಸಂಗ್ರಹಿಸಿದೆ. ಜತೆಗೆ, ದಾವೂದ್ ಹೊಸಫೋಟೋವನ್ನೂ ಬಿಡುಗಡೆ ಮಾಡುವ ಮೂಲಕ ಆತ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಎನ್ನುವುದನ್ನು ಖಚಿತಪಡಿಸಿದೆ.

ದಾವೂದ್ ಮಾತ್ರವಲ್ಲದೆ ಆತನ ಆತ್ಮೀಯ ಸಂಗಡಿಗರಾದ ಜಬೀರ್ ಸಿದ್ದಿಕ್, ಜಾವೆದ್ ಚೊಟಾನಿ ಹಾಗೂ ಮುಂಬೈ ಸ್ಫೋಟದ ಆರೋಪಿ ಜಾವೆದ್ ಪಟೇಲ್(ಚಿಕ್ನಾ) ಕೂಡ ಪಾಕಿಸ್ತಾನದಲ್ಲೇ  ನೆಲೆಸಿದ್ದು, ಅವರು ಆಗಾಗ ಕರಾಚಿ ದುಬೈ ನಡುವೆ ಓಡಾಡುತ್ತಿರುವ ಕುರಿತೂ ಭಾರತದ ಬಳಿ ದಾಖಲೆಗಳಿವೆ. ಸಿದ್ದಿಕ್ ಜು.20ರಂದು ಕರಾಚಿಯಿಂದ ದುಬೈಗೆ ಪ್ರಯಾಣಿಸಿದ್ದ. ನಾಲ್ಕು ದಿನಗಳ  ಬಳಿಕ ಕರಾಚಿಗೆ ವಾಪಸಾಗಿದ್ದ. ಚೊಟಾನಿ ಕರಾಚಿ ಹಾಗೂ ದುಬೈ ಮಧ್ಯೆ ಮಾರ್ಚ್ ಜೂನ್ ನಡುವೆ ಓಡಾಡಿಕೊಂಡಿದ್ದ.

ಚೊಟಾನಿ ಮೇಲೆ ಟೈಗರ್ ಮೆಮನ್ ಜತೆಗೆ ಮುಂಬೈ ಸರಣಿ ಸ್ಫೋಟದ ಸಂಚು ರೂಪಿಸಿದ ಆರೋಪ ಇದೆ. ಈತ ಅನೇಕ ಹವಾಲಾ ಚಟುವಟಿಕೆ ಗಳಿಗಾಗಿಯೂ ಭಾರತಕ್ಕೆ ಬೇಕಾಗಿದ್ದಾನೆ. ಆಗಾಗ ದುಬೈಗೆ ಭೇಟಿ ನೀಡುವ ಚಿಕ್ನಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಜತೆಗೆ ಆತ್ಮೀಯ ಸಂಪರ್ಕ ಹೊಂದಿದ್ದಾನೆ ಎನ್ನುತ್ತದೆ ಭಾರತೀಯ ಗುಪ್ತಚರ ಸಂಸ್ಥೆ ಬಳಿ  ಇರುವ ದಾಖಲೆಗಳು. ಆದರೆ, ದಾವೂದ್ ಪಾಕಿಸ್ತಾನದಿಂದ ಹೊರಗೆ ಓಡಾಡುತ್ತಿರುವ ಯಾವುದೇ ಮಾಹಿತಿ ಭಾರತಕ್ಕೆ ಸಿಕ್ಕಿಲ್ಲ. ಈ ಎಲ್ಲ ದಾಖಲೆಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರ  ಸಭೆಯ ವೇಳೆ ಪಾಕಿಸ್ತಾನದ ಮುಂದಿಡುವುದು ಭಾರತದ ಉದ್ದೇಶವಾಗಿತ್ತು. ಆದರೆ, ಈಗ ಎನ್‍ಎಸ್‍ಎ ಹಂತದ ಮಾತುಕತೆ ನಡೆಯುವುದೇ ಅನುಮಾನ ಎಂಬ ಪರಿಸ್ಥಿತಿ ನಿರ್ಮಾಣ ವಾದ  ಹಿನ್ನೆಲೆಯಲ್ಲಿ ಉದ್ದೇಶ ಪೂರ್ವಕವಾಗಿ ಭಾರತ ಈ ಮಾಹಿತಿಗಳನ್ನು ಲೀಕ್ ಮಾಡಿದೆ ಎಂದು ಹೇಳಲಾಗಿದೆ.

ಹೌದು, ನಾನು ದಾವೂದ್ ಪತ್ನಿ
ಪಾಕಿಸ್ತಾನದ ಪಾಲಿಗೆ ಮತ್ತೊಂದು ಮುಜುಗರ ಹಾಗೂ ಆಘಾತದ ಸುದ್ದಿಯೊಂದೆಂದರೆ `ಟೈಮ್ಸ್ ನೌ' ಸುದ್ದಿವಾಹಿನಿ ಕರಾಚಿಯಲ್ಲಿರುವ ದಾವೂದ್ ಪತ್ನಿ ಮೆಹಜಬೀನ್ ಜತೆಗೆ ಶನಿವಾರ  ನೇರವಾಗಿ ಮಾತುಕತೆ ನಡೆಸಿದ್ದಾಗಿ ಹೇಳಿಕೊಂಡಿದೆ. ಟೈಮ್ಸ್ ನೌ ವರದಿಗಾರ ದಾವೂದ್ ಪತ್ನಿಗೆ ಕರೆ ಮಾಡಿದಾಗ ಆ ಕಡೆಯಿಂದ ಮಾತನಾಡುತ್ತಿರುವ ಮಹಿಳೆ ತಾನು ದಾವೂದ್ ಪತ್ನಿ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜತೆಗೆ, ದಾವೂದ್ ಕರಾಚಿಯಲ್ಲೇ ಇದ್ದಾರೆ. ಅವರು ಮಲಗಿದ್ದಾರೆ ಎಂಬ ಉತ್ತರ ನೀಡಿದ್ದಾರೆ.

ಬಿಲಾವಲ್ ಭುಟ್ಟೋ ನಿವಾಸದ ಪಕ್ಕ ಮನೆ
ಭಾರತವು ಕೊನೆಯ ಬಾರಿ ಪಾಕಿಸ್ತಾನಕ್ಕೆ ದಾವೂದ್ ವಿಳಾಸ ನೀಡಿದ್ದು 2012ರಲ್ಲಿ. ಇಸ್ಲಾಮಾಬಾದ್ ಮತ್ತು ಕರಾಚಿಯಲ್ಲಿರುವ ಮೂರು ವಿಳಾಸಗಳ ಕುರಿತು ಆಗ ಭಾರತ ಪಾಕಿಸ್ತಾನಕ್ಕೆ ದಾಖಲೆ ಒದಗಿಸಿತ್ತು. ಇದಲ್ಲದೆ ಆತ ಇನ್ನೂ ಆರು ನಿವಾಸಗಳನ್ನು ಹೊಂದಿದ್ದಾನೆ ಎನ್ನುವ ಮಾಹಿತಿಯನ್ನು ಈಗ ಭಾರತ ಸಂಗ್ರಹಿಸಿದೆ. ಇವುಗಳಲ್ಲಿ ಎರಡನ್ನು ಆತ ಖರೀದಿಸಿದ್ದು ಎರಡು ವರ್ಷಗಳ ಹಿಂದೆ. ವಿಶೇಷವೆಂದರೆ ಇವುಗಳಲ್ಲಿ ಒಂದು ನಿವಾಸ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಪುತ್ರ ಬಿಲಾವಲ್ ಭುಟ್ಟೋ ನಿವಾಸದ ಬಳಿಯೇ ಇದೆ.

ಎರಡು ವರ್ಷಗಳ ಹಿಂದೆ ಅಂದರೆ ಸೆಪ್ಟೆಂಬರ್, 2013ರಲ್ಲಿ ಈ ನಿವಾಸವನ್ನು ಆತ ಖರೀದಿ ಮಾಡಿದ್ದ. ಅಲ್ಲದೆ, ಇವೆರಡೂ ನಿವಾಸಗಳು ಜಿಯಾವುದ್ದೀನ್ ಆಸ್ಪತ್ರೆಯ ಸನಿಹದಲ್ಲೇ ಇವೆ. ಇದರ  ಉದ್ದೇಶ ದಾವೂದ್‍ಗೆ ಅಗತ್ಯಬಿದ್ದಾಗಲೆಲ್ಲ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡುವುದೇ ಆಗಿದೆ. ದಾವೂದ್ ನನ್ನು ಅಮೆರಿಕವು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಈಗಾಗಲೇ ಘೋಷಿಸಿದೆ. ಇಷ್ಟಾದರೂ ಪಾಕಿಸ್ತಾನ ಆತನಿಗೆ ಹೇಗೆ ಆಶ್ರಯ ನೀಡಲು ಸಾಧ್ಯ ಎಂದು ಭಾರತದ ವಾದ. ಇದೇ ಕಾರಣಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಯುಎಇ ಭೇಟಿ ವೇಳೆ  ದಾವೂದ್ ಕುರಿತ ಮಹತ್ವದ ದಾಖಲೆಗಳನ್ನು ಭಾರತ ಅಲ್ಲಿನ ಆಡಳಿತಕ್ಕೆ ಒಪ್ಪಿಸಿದೆ. ಜತೆಗೆ, ಅಲ್ಲಿ ದಾವೂದ್ ಮಾಡಿಕೊಂಡಿರುವ ಆಸ್ತಿಯ ಕುರಿತೂ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಈ ವರ್ಷದ ದಾಖಲೆ
-ಈ ವರ್ಷ ಜ.4ರಂದು ದಾವೂದ್ ಪತ್ನಿ ಮೆಹಜಬೀನ್ ಶೇಖ್ ಮತ್ತು ಪುತ್ರಿ ಮಝಿಯಾ ಕರಾಚಿಯಿಂದ ದುಬೈಗೆ ಪ್ರಯಾಣ
-ಜ.11ರಂದು ಪುತ್ರಿ ಮಾರುಕ್, ಜುನೈದ್ ಮಿಯಾಂದಾದ್ ಜತೆಗೆ ಎಮಿರೇಟ್ಸ್ ವಿಮಾನದಲ್ಲೇ ಕರಾಚಿಗೆ ವಾಪಸ್ ಪ್ರಯಾಣ
-ಫೆ.19ರಂದು ದಾವೂದ್ ಪತ್ನಿ ಕರಾಚಿಯಿಂದ ದುಬೈಗೆ ಪ್ರಯಾಣ.
-ಫೆ.26ರಂದು ಕರಾಚಿಗೆ ವಾಪಸ್
-ದಾವೂದ್ ಪುತ್ರ ಮೊಯೀನ್, ಸೊಸೆ ಸಾನಿಯಾ ಮತ್ತು ಮೊಮ್ಮಕ್ಕಳು ಕರಾಚಿ ಮತ್ತು ದುಬೈ ನಡುವೆ ಮಾರ್ಚ್ ಮತ್ತೆ ಮೇ ನಡುವೆ ಪ್ರಯಾಣ
-ದಾವೂದ್ ಪತ್ನಿ ಮೆಹಜಬೀನ್ ಹೆಸರಿನಲ್ಲಿರುವ ಕರಾಚಿ ಡೆವಲಪ್ ಮೆಂಟ್ ಅಥಾರಿಟಿಯ ಬ್ಲಾಕ್ 4, ಡಿ13 ಮನೆಯ ಏಪ್ರಿಲ್ ತಿಂಗಳ ಫೋನ್ ಬಿಲ್ ಭಾರತದ ಬಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!