ಬೆಂಗಳೂರು: ಬಿಬಿಎಂಪಿ ಕದನ ಕಣದ ಕಲಿಗಳು ಈಗ ಚುನಾವಣೆ ಮುಗಿಸಿರುವ ಸಮಾಧಾನದಲ್ಲೇ ನೋ ಇದ್ದಾರೆ. ಆದರೆ, ಅವರ ಎದೆಯಲ್ಲಿ ಫಲಿತಾಂಶದ ನಡುಕ ಆರಂಭವಾಗಿದೆ.
ಕಣದಲ್ಲಿದ್ದ ಬಹುತೇಕ ಅಭ್ಯರ್ಥಿಗಳು ಶನಿವಾರ ರಾತ್ರಿಯೇ ಮೊಬೈಲ್‍ಗಳನ್ನು ಬಂದ್ ಮಾಡಿ ವಿಶ್ರಾಂತಿಗೆ ಜಾರಿದ್ದರು. ಭಾನುವಾರ ತಮ್ಮ ಪಕ್ಷದ ಕಚೇರಿಗಳಿಗೆ ಭೇಟಿ ನೀಡಿ ಮತದಾನದ ನಂತರದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ್ದಾರೆ. ಹಾಗೆಯೇ ಕೆಲವು ವೈಯುಕ್ತಿಕ ಕೆಲಸಗಳನ್ನೂ ಮುಗಿಸಿಕೊಂಡು ಮನರಂಜನೆ ಕಾರ್ಯಕ್ರಮಗಳಿಗೂ ಹೋಗಿದ್ದಾರೆ. ಇನ್ನು ಕೆಲವು
ಅಭ್ಯರ್ಥಿಗಳು ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥನೆಯನ್ನೂ ಮಾಡಿದ್ದಾರೆ.
ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಸಮೀಕ್ಷೆಯಿಂದಲೂ ಅಭ್ಯರ್ಥಿಗಳು ಚಿಂತೆಗೆ ಒಳಗಾಗಿದ್ದಾರೆ. ಯಾವ ಮತಗಟ್ಟೆಯಲ್ಲಿ ಎಷ್ಟು ಮತಗಳು, ಜಾತಿ ಲೆಕ್ಕಾಚಾರದಲ್ಲಿ ಹೇಗೆ ಲಾಭ ಎಂಬುದರ ಬಗ್ಗೆ ಚರ್ಚೆ ನಡೆದಿದೆ.