ಬೆಂಗಳೂರು: ದೇಶದಲ್ಲಿ ಪ್ರತಿ ಸೆಕೆಂಡ್‌ಗೆ ಒಂದು ಮಗುವಿನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆಘಾತಕಾರಿ ಮಾಹಿತಿ ಕೇಂದ್ರ ಸರ್ಕಾರ ನಡೆಸಿದ ಅಧ್ಯಯನದಿಂದ ಹೊರ ಬಿದ್ದಿದೆ.
ಒಟ್ಟು 17,220 ಮಕ್ಕಳು ಹಾಗೂ ಯುವಕರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ, ಶೇ. 52.4ರಷ್ಟು ಬಾಲಕರು ಮತ್ತು 47.06ರಷ್ಟು ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ.
2012ರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡೆ ತಂದರೆ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ಸಾಧ್ಯ ಎಂದು ಜುಲೈ 2015ರಲ್ಲಿ ವೈದ್ಯಕೀಯ ಸಂಶೋಧನೆಯ ಭಾರತೀಯ ಜರ್ನಲ್(ಐಜೆಎಂಆರ್)ನಲ್ಲಿ ಪ್ರಕಟವಾದ ಬೆಂಗಳೂರು ಸಂಶೋಧಕ ಡಾ.ಸುರೇಶ್ ಬಡ ಮಠ ಅವರ ಲೇಖನದಲ್ಲಿ ಸಲಹೆ ನೀಡಿದ್ದಾರೆ.
ನಿಮಾನ್ಸ್‌ನಲ್ಲಿ ಪ್ರಾದ್ಯಾಪಕರಾಗಿರುವ ಬಡ ಮಠ ಅವರು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾನೂನಿನಲ್ಲಿ ಕೆಲವು ನೂನ್ಯತೆಗಳಿವೆ. ಅದನ್ನು ಸರಿಪಡಿಸುವ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ಸಮ್ಮತಿ ಪ್ರಮುಖ ಅಂಶಗಳಲ್ಲಿ ಒಂದು. ಆದರೆ ಪೊಸ್ಕೊ ಕಾಯ್ದೆ ಈ ವಿಚಾರದಲ್ಲಿ ವಿಫಲವಾಗಿದೆ. ಮಗು ಅಥವಾ ಯುವಕ ವೈದ್ಯಕೀಯ ಪರೀಕ್ಷೆಗೆ ನಿರಾಕರಿಸಿದರೆ, ಕುಟುಂಬ ಸದಸ್ಯರು ಅಥವಾ ತನಿಖಾ ಅಧಿಕಾರಿ ಮನವೊಲಿಸಬೇಕು. ಆದರೆ ಪೊಸ್ಕೊ ಕಾಯ್ದೆಯಲ್ಲಿ ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನಗಳಿಲ್ಲ ಎಂದು ಡಾ. ಬಡಮಠ ಅವರು ಹೇಳಿದ್ದಾರೆ.