ಮುಂಬೈ: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಭೀತಿ ಎದುರಿಸುತ್ತಿದ್ದ ನಟ ಸಲ್ಮಾನ್ ಖಾನ್ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪೊಲೀಸರ ಶಂಕೆಯ ಮೇರೆಗೆ ನಟ ಸಲ್ಮಾನ್ ಖಾನ್ ರನ್ನು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ನಟ ಸಲ್ಮಾನ್ ಖಾನ್ ರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಆ ಮೂಲಕ ಸತತ 13 ವರ್ಷಗಳ ಸುದೀರ್ಘ ವಿಚಾರಣೆಗೆ ಬಾಂಬೆ ಹೈಕೋರ್ಟ್ ತೆರೆ ಎಳೆದಿದ್ದು, ನಟ ಸಲ್ಮಾನ್ ಖಾನ್ ದೊಡ್ಡ ರಿಲೀಫ್ ದೊರೆತಂತಾಗಿದೆ.
ಅವಘಡದ ವೇಳೆ ನಟ ಸಲ್ಮಾನ್‍ಖಾನ್ ಮದ್ಯಪಾನ ಮಾಡಿದ್ದನ್ನು ಹಾಗೂ ಕುಡಿದು ವಾಹನ ಚಾಲನೆ ಮಾಡಿದ್ದನ್ನು ಸಾಬೀತುಪಡಿಸಲು ಬೇಕಾಗಿರುವ ಬಲವಾದ ಸಾಕ್ಷಿಗಳು ಇಲ್ಲದಿರುವುದನ್ನು ವಿಚಾರಣೆಯ ಸಮಯದಲ್ಲಿ ಬಾಂಬೆ ಕೋರ್ಟ್ ಪರಿಗಣನೆಗೆ ತೆಗೆದುಕೊಂಡು ಈ ತೀರ್ಪನ್ನು ನೀಡಿದೆ ಎಂದು ಹೇಳಲಾಗುತ್ತಿದೆ.
2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಸಲ್ಮಾನ್ ಖಾನ್ ಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಬಳಿಕ ಖಾನ್ ಜಾಮೀನಿನ ಮೇಲೆ ಹೊರಬಂದಿದ್ದರು. ಕೆಳಹಂತದ ನ್ಯಾಯಾಲಯದ(ಮುಂಬೈ ಸೆಷನ್ ಕೋರ್ಟ್) ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳಹಂತದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಮಾನ್ ಸಲ್ಲಿಸಿದ್ದ ಮೇಲ್ಮನವಿಯ ಅರ್ಜಿಯ ತೀರ್ಪನ್ನು ಬರೆಸುವ ಪ್ರಕ್ರಿಯೆ ವೇಳೆ ನ್ಯಾ.ಎ.ಆರ್.ಜೋಷಿ ಅವರು, ಖಾನ್ ಮಾಜಿ ಅಂಗರಕ್ಷಕ ರವೀಂದ್ರ ಪಾಟೀಲ್ ನೀಡಿರುವ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಖಾನ್ ಖುಲಾಸೆಗೊಳ್ಳುವ ಸುಳಿವನ್ನು ನೀಡಿದ್ದರು.
ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಆಗಿದ್ದ ರವೀಂದ್ರ ಪಾಟೀಲ್ ಪೊಲೀಸರ ಬಳಿ ಒಂದು ಹೇಳಿಕೆ ಮತ್ತು ನ್ಯಾಯಾಧೀಶರ ಬಳಿ ಒಂದು ರೀತಿಯ ಹೇಳಿಕೆ ನೀಡುವ ಮೂಲಕ ಗೊಂದಲಕ್ಕೆ ಕಾರಣರಾಗಿದ್ದರು. ಹೀಗಾಗಿ ರವೀಂದ್ರ ಪಾಟೀಲ್ ರ ಹೇಳಿಕೆಯ ಆಧಾರದ ಮೇಲೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇನ್ನು ಮೂಲ ಎಫ್ ಐಆರ್ ಗೂ ನಂತರದ ಹೇಳಿಕೆಗಳಿಗೂ ವ್ಯತ್ಯಾಸವಿದ್ದು, ಅಂದು ಕಾರಿನಲ್ಲಿದ್ದ ಗಾಯಕ ಕಮಾಲ್ ಖಾನ್ ರನ್ನೂ ಪರೀಕ್ಷೆಗೆ ಒಳಪಡಿಸಬೇಕಿತ್ತೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅಪಘಾತ ಸಂಭವಿಸುವ ವೇಳೆ ನಟ ಸಲ್ಮಾನ್ ಖಾನ್ ವಾಹನ ಚಲಾಯಿಸಿದ್ದ ಬಗ್ಗೆಯೂ ಪೂರಕ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಾಲಯ ಹೇಳಿದ್ದು, ಪ್ರಾಸಿಕ್ಯೂಷನ್ ವಾದಿಸುತ್ತಿರುವಂತೆ ನಟ ಸಲ್ಮಾನ್ ಖಾನ್ ಕುಡಿದಿದ್ದರ ಬಗ್ಗೆಯೂ ಆಧಾರಗಳಿಲ್ಲ. ಈ ಹಿಂದೆ ನಟ ಸಲ್ಮಾನ್ ಖಾನ್ ಅವರ ಕುಡಿತದ ಬಗ್ಗೆ ಪರೀಕ್ಷಿಸಲು ಅವರಿಂದ ಪಡೆದಿದ್ದ ರಕ್ತದ ಪ್ರಮಾಣದಲ್ಲಿ ಏರುಪೇರಾಗಿದ್ದನ್ನು ನ್ಯಾಯಾಲಯ ಗಮನಿಸಿದ್ದು, ರಕ್ತದ ಮಾದರಿ ಪರೀಕ್ಷೆಯ ಫಲಿತಾಂಶದ ಮೇಲೆ ಶಂಕೆ ವ್ಯಕ್ತವಾಗುತ್ತಿದೆ. 3 ಎಂಎಲ್ ಇದ್ದ ರಕ್ತದ ಮಾದರಿ 4 ಎಂಎಲ್ ಆಗಿದ್ದು ಹೇಗೆ ಎಂದು ನ್ಯಾಯಾಲಯ ಪ್ರಾಸಿಕ್ಯೂಷನ್ ಅನ್ನು ಪ್ರಶ್ನಿಸಿದೆ.
ಇದೇ ವೇಳೆ ಪೊಲೀಸರ ಕಾರ್ಯವೈಖರಿ ಕುರಿತು ಖಂಡನೆ ವ್ಯಕ್ತಪಡಿಸಿದ ನ್ಯಾಯಾಲಯ, ಪ್ರಕರಣ ಸಂಬಂಧ ಸೂಕ್ತ ದಾಖಲೆ ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ದಶಕದಿಂದ ನಟ ಸಲ್ಮಾನ್ ಖಾನ್ ರನ್ನು ಪೀಡಿಸುತ್ತಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಇಂದು ಬಹುತೇಕ ತೆರೆ ಬಿದ್ದಿದ್ದು, ಬಾಂಬೆ ಹೈಕೋರ್ಟ್ ನ ಆದೇಶದ ವಿರುದ್ಧ ಪ್ರಾಸಿಕ್ಯೂಷನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.