ಜೈಪುರ/ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್(ಐಎಸ್ಐಎಸ್) ಉಗ್ರರೊಂದಿಗೆ ಸಂಪರ್ಕ ಹೊಂದಿರವ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯ ಮೊಹಮ್ಮದ್ ಸಿರಾಜುದ್ದೀನ್ ಎಂಬುವವರನ್ನು ಜೈಪುರದಲ್ಲಿ ಗುರುವಾರ ಬಂಧಿಸಲಾಗಿದೆ.
ಸಿರಾಜುದ್ದೀನ್ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ)ನ ಮಾರುಕಟ್ಟೆ ವಿಭಾಗದ ಅಧಿಕಾರಿಯಾಗಿದ್ದಾರೆ. ಅವರನ್ನು, ರಾಜಸ್ಥಾನದ ಉಗ್ರ ನಿಗ್ರಹ ಪಡೆ(ಎಟಿಎಸ್) ಹಾಗೂ ವಿಶೇಷ ಕಾರ್ಯಪಡೆ(ಎಸ್ಒಜಿ) ಬಂಧಿಸಿದೆ. ಐಎಸ್ ಜೊತೆ ಸಂಪರ್ಕ, ರಹಸ್ಯ ಮಾಹಿತಿಗಳನ್ನು ಐಎಸ್ ಗೆ ರವಾನೆ ಹಾಗೂ ದೇಶದಲ್ಲಿ ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡುತ್ತಿದ್ದ ಆರೋಪವನ್ನು ಸಿರಾಜುದ್ದೀನ್ ಮೇಲೆ ಹೊರಿಸಲಾಗಿದೆ ಎಂದು ಎಟಿಎಸ್ ಮತ್ತು ಎಸ್‍ಒಜಿ ಹೆಚ್ಚುವರಿ ಡಿಜಿಪಿ ಅಲೋಕ್ ತ್ರಿಪಾಠಿ ತಿಳಿಸಿದ್ದಾರೆ. ದೂರೊಂದರ ಆಧಾರದಲ್ಲಿ ಸಿರಾಜುದ್ದೀನ್ ವಾಟ್ಸ್ ಆಪ್ ಫೇಸ್ ಬುಕ್ ಪರಿಶೀಲಿಸಲಾಗಿದ್ದು, ಆತ ಐಎಸ್‍ಗೆ ಸೇರುವಂತೆ ಆನ್ ಲೈನ್‍ನಲ್ಲೇ ಯುವಕರನ್ನು ಹುರಿದುಂಬಿಸುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ.
ಐಎಸ್‍ನ ನಿಯತಕಾಲಿಕ 'ದಬೀಕ್'ನ ಚಿತ್ರಗಳು, ವಿಡಿಯೋಗಳು ಸೇರಿದಂತೆ ಈತನ ಮನೆಯಲ್ಲಿದ್ದ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತ್ರಿಪಾಠಿ ಹೇಳಿದ್ದಾರೆ.
ಹಣಕಾಸು ಮುಖ್ಯಸ್ಥ ಸಾವು
ಐಎಸ್ ಮೇಲೆ ಇತ್ತೀಚೆಗೆ ಅಮೆರಿಕ ನಡೆಸಿದ ದಾಳಿಯಲ್ಲಿ ಸಂಘಟನೆಯ ಹಣಕಾಸು ವಿಭಾಗದ ಮುಖ್ಯಸ್ಥ ಅಬು ಸಲಾಹ್ ಮೃತಪಟ್ಟಿದ್ದಾನೆ. ಈ ಬಗ್ಗೆ ವಾಷಿಂಗ್ಟನ್‍ನಲ್ಲಿ ಗುರುವಾರ ಮಾಹಿತಿ ಪ್ರಕಟಿಸಲಾಗಿದೆ. ಇರಾಕ್ ನ ಯಾವ ಭಾಗದಲ್ಲಿ ಆತ ಹತನಾಗಿದ್ದಾನೆ ಎಂಬ ಬಗ್ಗೆ ಅಮೆರಿಕ ಮಿಲಿಟರಿ ಮಾಹಿತಿ ನೀಡಲಿಲ್ಲ. ಈತನ ಜತೆ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಾಗ್ದಾದ್ ನಲ್ಲಿರುವ ಅಮೆರಿಕ ಸೇನೆಯ ಘಟಕದ ವಕ್ತಾರ ಕ.ಸ್ಟೀವ್ ವಾರನ್ ತಿಳಿಸಿದ್ದಾರೆ. ಅಬು ಸಲಾಹ್ ಐಎಸ್ ಸಂಘಟನೆಯ ಹಣಕಾಸು ವಿಭಾಗದ ಮುಖ್ಯಸ್ಥನಾಗಿದ್ದ ಎಂದು ವಾರನ್ ಹೇಳಿದ್ದಾರೆ.