ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ವಿಷಯಗಳನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿದಕ್ಕಾಗಿ ಸಿಬಿಐ ಅನ್ನು ಕೋರ್ಟ್ ಶುಕ್ರವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದ ಎರಡು ದಿನಗಳ ನಂತರ ಆರೋಪಿ ಸೂರಜ್ ಪಾಂಚೋಲಿಯನ್ನು ಇಂದು ವಿಶೇಷ ಮಹಿಳಾ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ಪ್ರಕರಣ ವಿಚಾರಣೆಯನ್ನು ಕೋರ್ಟ್ ಜನವರಿ 18ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ, ನನಗಿಂತ ಮೊದಲು ಚಾರ್ಜ್‌ಶೀಟ್ ಮಾಹಿತಿ ಮಾಧ್ಯಮಕ್ಕೆ ಸಿಕ್ಕಿದ್ದು ಹೇಗೆ? ಎಂದು ವಿಶೇಷ ನ್ಯಾಯಾಧೀಶ ಎ.ಎಸ್.ಶಿಂಧೆ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅನ್ನು ಪ್ರಶ್ನಿಸಿದರು. ಅಲ್ಲದೆ 'ಸಿಬಿಐಯಿಂದಲೇ ಈ ಮಾಹಿತಿ ಸೋರಿಕೆಯಾಗಿದೆ. ಇದೊಂದು ಗಂಭೀರ ವಿಷಯ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಿ' ಎಂದು ಎಚ್ಚರಿಸಿದರು.
ಈ ಮಧ್ಯೆ, ಕೋರ್ಟ್ ಹೊರಗಡೆ, ಸಿಬಿಐ ಚಾರ್ಜ್‌ಶೀಟ್ ನನಗೆ ತೃಪ್ತಿ ತಂದಿಲ್ಲ ಎಂದು ಜೀಯಾ ಅವರ ತಾಯಿ ರುಬಿಯಾ ಖಾನ್ ವರದಿಗಾರರಿಗೆ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿನ ಕೆಲವು ಮಹತ್ವದ ಅಂಶಗಳು ಗುರುವಾರ ಮಾಧ್ಯಮಕ್ಕೆ ಲಭ್ಯವಾಗಿದ್ದು, ಜಿಯಾ ಪ್ರಿಯತಮ ಸೂರಜ್ ಪಾಂಚೋಲಿ ಮೆರೆದ ಕ್ರೌರ‌್ಯವನ್ನೂ ಆರೋಪಪಟ್ಟಿಯಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ.
ಜಿಯಾಖಾನ್‌ಗೆ ವೈದ್ಯರ ಮಾರ್ಗದರ್ಶನದಂತೆ ಸೂರಜ್ ತಮ್ಮ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಸ್ವತಹ ಗರ್ಭಪಾತ ಮಾಡಿ, ಭ್ರೂಣವನ್ನು ಶೌಚಾಲಯದಲ್ಲಿ ಬಿಸಾಡಿರುವ ಬಗ್ಗೆ ಆರೋಪ ಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.