ವಾಷಿಂಗ್ಟನ್: ಫೇಸ್‍ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಬಳಿಕ ಈಗ ಭಾರತ ಸಂಜಾತ, ಗೂಗಲ್ ಸಿಇಒ ಸುಂದರ್ ಪಿಚೈ ಅವರು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಮುಸ್ಲಿಂವಿರೋಧಿ ಹೇಳಿಕೆಯನ್ನು ಪಿಚೈ ಅವರು ಖಂಡಿಸಿದ್ದು, ಮುಸ್ಲಿಮರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ``ಭಯವು ನಮ್ಮ ಮೌಲ್ಯಗಳನ್ನು ಸೋಲಿಸದಿರಲಿ'' ಎಂಬ ಶೀರ್ಷಿಕೆಯಲ್ಲಿ ಬಹಿರಂಗ ಪತ್ರ ಬರೆದಿರುವ ಭಾರತೀಯ ಮೂಲದ ಸುಂದರ್ ಪಿಚೈ, ``ವಲಸಿಗರು ಹೊಸ ಅಮೆರಿಕನ್ನರು. ಅವರನ್ನು ಬರ ಮಾಡಿಕೊಳ್ಳುವಿಕೆ, ಸಹಿಷ್ಣುತೆ, ವೈವಿಧ್ಯತೆಯೇ ಅಮೆರಿಕದ ಶಕ್ತಿ. ಅಮೆರಿಕ ಎಂದಿಗೂ ವಲಸಿಗರ ನಾಡು'' ಎಂದಿದ್ದಾರೆ. ಜತೆಗೆ, ಇತ್ತೀಚೆಗೆ ಅಮೆರಿಕದಲ್ಲಿ ನಡೆಯುತ್ತಿರುವ ಅಸಹಿಷ್ಣು ಬೆಳವಣಿಗೆಗಳಿಂದ ತುಂಬಾ ನೋವಾಗಿದೆ ಎಂದೂ ಅವರು ಹೇಳಿದ್ದಾರೆ.
ಬ್ಲಾಗ್ಪ್ರಕಟಿಸುವಂತಹ ವೇದಿಕೆ ಮೀಡಿಯಂನಲ್ಲಿ ಈ ಬಹಿರಂಗ ಪತ್ರವನ್ನು ಅಪ್‍ಲೋಡ್ ಮಾಡಲಾಗಿದೆ. ಇತ್ತೀಚೆಗಷ್ಟೇ ಟ್ರಂಪ್ ಅವರು, ``ಅಮೆರಿಕಕ್ಕೆ ಮುಸ್ಲಿಮರ ಪ್ರವೇಶ ನಿಷೇಧಿಸಬೇಕು'' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸುಂದರ್ ಪಿಚೈ ಮಾತುಗಳಿವು ``ನಾನು 22 ವರ್ಷಗಳ ಹಿಂದೆ ಭಾರತ ದಿಂದ ಅಮೆರಿಕಕ್ಕೆ ಬಂದೆ. ಸಮಯ ಕಳೆದಂತೆ ಪರಿಶ್ರಮವು ನನಗೆ ಅವಕಾಶಗಳ ಬಾಗಿಲು ತೆರೆಯಿತು. ನಾನು ಇಲ್ಲೇ ಬದುಕನ್ನು ಕಂಡೆ. ಭಾರತದಲ್ಲಿ ಹೇಗೆ ಬೆಳೆದೆನೋ, ಅದೇ ರೀತಿ ಅಮೆರಿಕವೂ ನನ್ನದೇ ದೇಶ ಎನ್ನುವಷ್ಟರ ಮಟ್ಟಿಗೆ ನಾನು ಇಲ್ಲಿಯವನಾದೆ. ಅಮೆರಿಕವು ಅವಕಾಶಗಳ ನಾಡಷ್ಟೇ ಅಲ್ಲ. ಇಲ್ಲಿನ ಮುಕ್ತತೆ, ಸಹಿಷ್ಣುತೆ, ಎಲ್ಲರೂ ತನ್ನವರು ಎಂಬ ಭಾವವು ಈ ದೇಶದ ಅತಿದೊಡ್ಡ ಶಕ್ತಿ. ಒಟ್ಟಿನಲ್ಲಿ ಅಮೆರಿಕವು ವಲಸಿಗರ ದೇಶ. ಹೀಗಾಗಿಯೇ `ಒಂದು ಧರ್ಮ ದ, ಒಂದು ಸಮುದಾಯದ, ಒಂದು ವರ್ಗದ ಜನರ ಧ್ವನಿ, ಚಿಂತನೆಗಳು ಮತ್ತು ಕೊಡುಗೆಗಳನ್ನು ದೂರವಿಟ್ಟರೆ, ನಮ್ಮ ದೇಶ ಚೆನ್ನಾಗಿರುತ್ತದೆ' ಎಂಬ ಭಾವನೆ, ಅಸಹಿಷ್ಣು ಹೇಳಿಕೆಗಳು, ಬೆಳವಣಿಗೆಗಳು ಹೃದಯಕ್ಕೆ ತುಂಬಾ ನೋವುಂಟುಮಾಡುತ್ತಿರುವುದು.
ನೀವು ಒಂದು ಕಂಪನಿಯನ್ನೇ ಆರಂಭಿಸಿ ಅಥವಾ ಒಂದು ದೇಶದ ನೇತೃತ್ವ ವನ್ನೇ ವಹಿಸಿ, ನಿಮ್ಮ ಸುತ್ತಲೂ ವೈವಿಧ್ಯಮಯ ಧ್ವನಿಗಳು, ಹಿನ್ನೆಲೆಗಳು, ಅನುಭವಗಳು ಸೇರಿದಾಗ ಮಾತ್ರವೇ ಉತ್ತಮ ಚರ್ಚೆ, ಉತ್ತಮ ನಿರ್ಧಾರ ಮತ್ತು ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ ಎನ್ನುವುದು ನನ್ನ ನಂಬಿಕೆ.'' ಕೊನೆಯ ಮಾತು: ``ಈ ಲೇಖನವನ್ನು ನಾನು ಪೋಸ್ಟ್ ಮಾಡಬೇಕೋ, ಬೇಡವೋ ಎಂಬ ಬಗ್ಗೆ ಚರ್ಚಿಸಿದೆ. ಏಕೆಂದರೆ, ಅಸಹಿಷ್ಣುತೆಯ ಬಗ್ಗೆ ಹೆಚ್ಚು ಹೆಚ್ಚು ಟೀಕಿಸಿದಷ್ಟೂ ಈ ಚರ್ಚೆಗೆ ನಾವೇ ಆಮ್ಲಜನಕ ಒದಗಿಸಿದಂತಾಗುತ್ತದೆ. ಆದರೂ, ನಾವು ಮಾತಾಡಬೇಕು ಅದರಲ್ಲೂ ನಿರ್ದಿಷ್ಟವಾಗಿ ದಾಳಿಗೆ ಒಳಗಾಗದಂತಹ ನಾವುಗಳು ಮಾತ ನಾಡ ಬೇಕು. ಎಲ್ಲರಿಗೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳುವ ಹಕ್ಕಿದೆ.
ಆದರೆ, ಇದುವೇ ಎಲ್ಲರ ಅಭಿಪ್ರಾಯವಲ್ಲ ಎನ್ನುವುದನ್ನು ಪ್ರಾತಿನಿಧ್ಯ ಕಡಿಮೆಯಿರುವ ಸಮುದಾಯದವರಿಗೆ ಅರ್ಥಮಾಡಿಸಿಕೊಳ್ಳಬೇಕು. ಒಟ್ಟಿ ನಲ್ಲಿ, ಭಯವು ನಮ್ಮ ಮೌಲ್ಯಗಳನ್ನು ಸೋಲಿಸದಿರಲಿ. ಅಮೆರಿಕದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ನಾವೆಲ್ಲರೂ ಮುಸ್ಲಿಮರು ಹಾಗೂ ಇತರೆ ಅಲ್ಪಸಂಖ್ಯಾತ ಸಮುದಾಯಗಳನ್ನು ಬೆಂಬಲಿಸೋಣ.''
ಯಾರಿವರು ಪಿಚೈ?
ಸುಂದರ್‍ರಾಜನ್ ಪಿಚೈ ಮೂಲತಃ ತಮಿಳುನಾಡಿನವರು. 2004ರಲ್ಲಿ ಗೂಗಲ್ ಕಂಪನಿಗೆ ಸೇರಿದ ಇವರು, ಕಳೆದ ವರ್ಷದ ಆಗಸ್ಟ್‍ನಲ್ಲಿ ಗೂಗಲ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿಇಒ) ಆಗಿ ಅಧಿಕಾರ ಸ್ವೀಕರಿಸಿದರು. ವಿಶ್ವದ ಪ್ರಮುಖ ಕಂಪನಿಗಳ ಸಿಇಒಗಳ ಹುದ್ದೆಯನ್ನು ಭಾರತೀಯ ಮೂಲದವರೇ ಅಲಂಕರಿಸಿದ್ದು, ಇವರಲ್ಲಿ ಪಿಚೈ ಕೂಡ ಒಬ್ಬರು.