ಬೆಂಗಳೂರು: ಬತ್ತ ಮತ್ತು ರಾಗಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಒತ್ತಾಯಿಸಿ ರೈತ ಸಂಘಟನೆಗಳು ನಡೆಸಿದ ಕಾನೂನು ಹೋರಾಟ ಕೊನೆಗೂ ಫಲ ನೀಡಿದೆ.
ರಾಜ್ಯ ಸರ್ಕಾರ ಮುಂಗಾರು ಸೀಸನ್‍ನ ಭತ್ತ ಮತ್ತು ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ನಿರ್ಧರಿಸಿದೆ. ಕ್ವಿಂಟಾಲ್ ಬತ್ತಕ್ಕೆ ರು.1,510 ಮತ್ತು ರಾಗಿಗೆ ರು.2,100 ನಿಗದಿ ಮಾಡಿದ್ದು, ಡಿಸೆಂಬರ್ 28ರಿಂದ ಖರೀದಿ ಆರಂಭಿಸಲಿದೆ. ಕ್ವಿಂಟಾಲ್ ಭತ್ತಕ್ಕೆ ರು.100 ಮತ್ತು ರಾಗಿಗೆ ರು.450ಗಳನ್ನು ಪ್ರೋತ್ಸಾಹ ಧನವಾಗಿ ನೀಡಲು ನಿರ್ಧರಿಸಿದೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇದನ್ನ ಅಧಿಕೃತವಾಗಿ ಪ್ರಕಟಿಸುತ್ತಿಲ್ಲ. ಧಾನ್ಯ ಖರೀದಿ ಹೊಣೆ ಹೊತ್ತಿರುವ ರಾಜ್ಯ ಆಹಾರ ನಿಗಮ ಎಲ್ಲ ಜಿಲ್ಲೆಗಳು, ತಾಲೂಕು ಕೇಂದ್ರಗಳಲ್ಲಿ ಕನಿಷ್ಠ 20 ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಿದೆ.
ಸಾಧ್ಯವಾದಷ್ಟು ಅಕ್ಕಿ ಗಿರಣಿ ಮತ್ತು ರಾಗಿ ಹೊಲಗಳ ಸಮೀಪ ಖರೀದಿ ಕೇಂದ್ರ ತೆರೆಯಲಾಗುತ್ತಿದೆ. ಈ ಮೂಲಕ ರೈತರಿಗೆ ಸಾಗಣೆ ವೆಚ್ಚದ ಹೊರೆ ಬೀಳದಂತೆ ನೋಡಿಕೊಳ್ಳಲಾಗುತ್ತಿದೆ. ಹಾಗೆಯೇ ರೈತರಿಂದ ಖರೀದಿಸುವ ಧಾನ್ಯ ಅನ್ನಭಾಗ್ಯಕ್ಕೆ ಹೋಗುವುದರಿಂದ ಉತ್ತಮ ಗುಣಮಟ್ಟದ ಧಾನ್ಯ ಮಾತ್ರ ಖರೀದಿಗೆ ಕೇಂದ್ರಗಳಲ್ಲಿ ತಜ್ಞರು ಮತ್ತು ಪರೀಕ್ಷಕರ ತಂಡವನ್ನು ನಿಯೋಜಿಸಲಾಗುತ್ತಿದೆ. ಇವರು ಭತ್ತದಲ್ಲಿ ತೇವಾಂಶ ಶೇ.17ರಷ್ಟಿರುವುದನ್ನು ಮತ್ತು ಶೇ.2ಕ್ಕಿಂತ ಕಡಿಮೆ ಜೊಳ್ಳಿರುವುದನ್ನು, ಕಳಪೆ ಇಲ್ಲದ ರಾಗಿಯನ್ನು ಪರೀಕ್ಷಿಸಿ ಖರೀದಿಗೆ ಅನುಮತಿ ನೀಡಲಿದ್ದಾರೆ.
ಈ ಬಾರಿ ಖರೀದಿ ವಿಶೇಷವೆಂದರೆ ನಿಗಮದ ಎಂಡಿ ರೋಹಿಣಿ ಸಿಂಧೂರು ರೈತರಿಗೆ ಸ್ಥಳದಲ್ಲೇ ಹಣ ಸಿಗುವಂತೆ ಮಾಡಿದ್ದಾರೆ. ಅಂದರೆ, ರೈತರಿಂದ ಧಾನ್ಯ ಖರೀದಿಸಿದ ತಕ್ಷಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗುತ್ತದೆ. ಹಾಗೆಯೇ ಖರೀದಿಸಿದ ಧಾನ್ಯದ ಪ್ರಮಾಣ ಮತ್ತು ಗುಣಮಟ್ಟದ ವಿವರವನ್ನು ತಕ್ಷಣ ವೆಬ್‍ಸೈಟ್‍ನಲ್ಲಿ ಅಪ್ ಲೋಡ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಗಿಗೆ ಬಂಪರ್ ಬೆಲೆ: ಈ ಬಾರಿ ಬೆಂಬಲ ಬೆಲೆ ರಾಗಿಗೆ ಹೆಚ್ಚು ಅನುಕೂಲವಾಗಲಿದೆ. ರಾಗಿಗೆ ಮಾರುಕಟ್ಟೆಯಲ್ಲಿ ರು.1,600 ಇದ್ದರೆ ರು.2,100 ಬೆಂಬಲ ಬೆಲೆ ಸಿಗಲಿದೆ. ಇನ್ನು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆ ಕಡಿಮೆಯಾಗಿದೆ. ಕಳೆದ ಬಾರಿ ಮುಂಗಾರಿನಲ್ಲಿ ರಾಜ್ಯದಲ್ಲಿ 47ಲಕ್ಷ ಟನ್ ಭತ್ತ ಉತ್ಪಾದನೆಯಾಗಿತ್ತು. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಶೇ.16ರಷ್ಟು ಉತ್ಪಾದನೆ ಕಡಿಮೆಯಾಗಿ 39ಲಕ್ಷ ಟನ್‍ಗೆ ಇಳಿಯುವ ಅಂದಾಜಿದೆ. ಆದರೆ ಬತ್ತಕ್ಕೆ ನೀಡಿರುವ ಬೆಂಬಲ ಬೆಲೆ ಕಡಿಮೆ ಎನ್ನಲಾಗಿದೆ. ಏಕೆಂದರೆ, ರಾಜ್ಯದಲ್ಲಿ ಸೋನ ಮಸೂರಿ ಮತ್ತು ಸೂಪರ್ ಫೈನ್ ಬತ್ತ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ರು.2,100ವರೆಗೂ ದರ ಇದೆ. ಹೀಗಿರುವಾಗ ಬೆಂಬಲ ಬೆಲೆ ರು.1,510 ನಿಗದಿಯಾಗಿರುವುದರಿಂದ ರೈತರು ಖರೀದಿ ಕೇಂದ್ರದತ್ತ ಬರುವ ಸಾಧ್ಯತೆಗಳು ಕಡಿಮೆಯಾಗಬಹುದು.
ಮಲೆನಾಡು, ಕರಾವಳಿಯಲ್ಲಿ ದಪ್ಪ ಬತ್ತ ಬೆಳೆಯುವುದರಿಂದ ಖರೀದಿ ಕೇಂದ್ರಕ್ಕೆ ಬರುವುದು ಕಡಿಮೆ. ಆದರೂ ರು.900ಕ್ಕೆ ಮಾರಾಟವಾಗುವ ಸನ್ನಿವೇಶ ಬರಬಹುದು. ಇಂಥ ಪ್ರದೇಶದಲ್ಲಿ ರೈತರು ಬೆಂಬಲ ಬೆಲೆಗೆ ಮಾರಾಟ ಮಾಡುವುದು ಅನಿವಾರ್ಯ ಆಗಬಹುದು. ಆದರೂ ಈ ಬಾರಿ 1.20ಲಕ್ಷ ಟನ್ ಭತ್ತವನ್ನು ಬೆಂಬಲ ಬೆಲೆಗೆ ಖರೀದಿಸಬೇಕೆಂದು ನಿಗಮದ ಸೂಚಿಸಿದೆ. ಕಳೆದ ವರ್ಷ ರಾಗಿ 12.31ಲಕ್ಷ ಟನ್ ಬೆಳೆಯಲಾಗಿತ್ತು. ಈ ಬಾರಿ 10.2ಲಕ್ಷ ಟನ್ ಉತ್ಪಾದಿಸಲಾಗಿದೆ. ಅಂದರೆ, ರಾಗಿ ಉತ್ಪಾದನೆಯಲ್ಲೂ ಶೇ.19ರಷ್ಟು ಕಡಿಮೆಯಾಗಿದೆ. ಆದರೂ ಆಯೋಗ ಈ ಬಾರಿ 1.35ಲಕ್ಷ ಟನ್ ರಾಗಿ ಖರೀದಿಸಲೇಬೇಕೆಂದು ಹೇಳಲಾಗಿದೆ.
ಡಿಸೆಂಬರ್ ಒಳಗಾಗಿ ಭತ್ತ, ರಾಗಿ ಖರೀದಿ ಆರಂಭಿಸಲು ಶಿಫಾರಸು ಮಾಡಲಾಗಿದೆ. ರೈತರಿಗೆ ಅನುಕೂಲವಾಗುವಂತೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜತೆಗೆ ತಕ್ಷಣ ಹಣ ಪಾವತಿಯಾಗುವಂತೆ ಶಿಫಾರಸು ಮಾಡಲಾಗಿದೆ.
-ಡಾ.ಪ್ರಕಾಶ್ ಕಮ್ಮರಡಿ ರಾಜ್ಯ ಬೆಲೆ ಆಯೋಗದ ಅಧ್ಯಕ್ಷ
ಮುಂಗಾರು ಬತ್ತ, ರಾಗಿ ಮತ್ತು ಜೋಳ ಬೆಂಬಲ ಬೆಲೆಯಲ್ಲಿ ಖರೀದಿಗೆ ಸರ್ಕಾರ ಎಲ್ಲಾ ಸಿದ್ಧತೆ ನಡೆಸಿದೆ. ಈ ಬಾರಿ ರೈತರಿಗೆ ನೇರವಾಗಿ ಹಣ ತಲುಪಲು ಕ್ರಮಕೈಗೊಳ್ಳಲಾಗಿದೆ. ಅಕ್ರಮಗಳನ್ನೂ ತಡೆಯಲು ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.
-ರೋಹಿಣಿ ಸಿಂಧೂರಿ, ಎಂಡಿ,
ಆಹಾರ, ನಾಗರಿಕ ಪೂರೈಕೆ ನಿಗಮ