ಪ್ರಧಾನ ಸುದ್ದಿ

ಸೋನಿಯಾ, ರಾಹುಲ್‌ರನ್ನು ಕಟಕಟೆಗೆ ಕರೆ ತಂದಿದ್ದಕ್ಕೆ ಹೆಮ್ಮೆ ಇದೆ: ಸುಬ್ರಮಣ್ಯನ್ ಸ್ವಾಮಿ

Lingaraj Badiger

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೋರ್ಟ್ ಕಟಕಟೆಗೆ ಬರುವಂತೆ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ದೂರುದಾರ ಹಾಗೂ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ಪ್ರಕರಣ ಸಂಬಂಧ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರಿಗೆ ಪಟಿಯಾಲ ಹೌಸ್ ಕೋರ್ಟ್ ಜಾಮೀನು ಮಂಜೂರು ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮಿ, ಜಾಮೀನು ನೀಡುವುದಕ್ಕೆ ನಾನು ವಿರೋಧಿಸಿದ್ದೆ. ಆದರೆ ನನ್ನ ಬೇಡಿಕೆಯನ್ನು ಕೋರ್ಟ್ ತಿರಸ್ಕರಿಸಿದೆ ಎಂದರು.

ಸಾಕ್ಷ್ಯಗಳ ಮೂಲಕವೇ ಪ್ರಕರಣದ ವಿಚಾರಣೆ ನಡೆಯುಲಿದ್ದು, ಫೆಬ್ರುವರಿ 20ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಮತ್ತಷ್ಟು ಸಾಕ್ಷ್ಯ ಒದಗಿಸುವುದಾಗಿ ಸ್ವಾಮಿ ತಿಳಿಸಿದರು.

ಇದೇ ವೇಳೆ, ಪ್ರಕರಣದಲ್ಲಿ ಬಿಜೆಪಿಯ ಒತ್ತಡ ಇದೆ ಎಂಬ ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ ಸ್ವಾಮಿ, ಪಕ್ಷದಲ್ಲಿ ನನ್ನ ಮೇಲೆ ಯಾರೂ ಒತ್ತಡ ಹೇರುತ್ತಿಲ್ಲ ಮತ್ತು ಈ ಸಂಬಂಧ ಬಿಜೆಪಿ ನನಗೆ ಯಾವುದೇ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

SCROLL FOR NEXT