ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದ ಹಿಂದೂಸ್ತಾನಿ ಅವಾಂ ಮೋರ್ಚಾ (ಹೆಚ್ಎಎಂ) ಈಗ ಮೈತ್ರಿಕೂಟದಿಂದ ಹೊರಬರಲು ನಿರ್ಧರಿಸಿದೆ.
ಎನ್ ಡಿಎ ಮೈತ್ರಿಕೂಟದಿಂದ ಹೊರಬರುವುದರ ಬಗ್ಗೆ ಪಕ್ಷದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೆಚ್ ಎ ಎಂ ರಾಜ್ಯಾಧ್ಯಕ್ಷ ಬ್ರಿಶೇನ್ ಪಟೇಲ್ ಮಾಹಿತಿ ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡ ಪರಿಣಾಮ ಹೆಚ್ ಎ ಎಂ ಮುಸ್ಲಿಂ ಮತಗಳನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಎನ್ ಡಿಎಯೊಂದಿಗೆ ಮುಂದುವರೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಮೈತ್ರಿಕೂಟ ತೊರೆಯುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಬ್ರಿಶೇನ್ ಪಟೇಲ್ ತಿಳಿಸಿದ್ದಾರೆ.
ಮುಸ್ಲಿಮರು ಎನ್ ಡಿಎ ಯೊಂದಿಗಿಲ್ಲ, ಎನ್ ಡಿಎ ಮೈತ್ರಿಕೂಟಕ್ಕೆ ಎಂದಿಗೂ ಬೆಂಬಲ ನೀಡುವುದಿಲ್ಲ.ಚುನಾವಣೆಗಳಲ್ಲಿ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸುವುದರಿಂದ ಎನ್ ಡಿಎ ಮೈತ್ರಿಕೂಟದಿಂದ ಹೊರಬರುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದಿದ್ದಾರೆ ಪಟೇಲ್. ಆದರೆ ಈ ಬಗ್ಗೆ ಹೆಚ್ ಎ ಎಂ ಮುಖಂಡ, ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಪ್ರತಿಕ್ರಿಯೆ ನೀಡಿಲ್ಲ.