ಬೆಂಗಳೂರು: ಬೀಳ್ಕೊಟ್ಟು ಹೊಸವರ್ಷವನ್ನು ಬರ ಮಾಡಿಕೊಳ್ಳಲು ಮಹಾನಗರಿ ಈಗಾಗಲೇ ಸಜ್ಜಾಗಿದೆ. ಬೆಂಗಳೂರಿನ ಜನತೆ ಕೂಡ ಈ ಸಂಭ್ರಮಕ್ಕಾಗಿಯೇ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಹೊಸ ವರ್ಷ ಸ್ವಾಗತಕ್ಕೆ ಕಾಯುತ್ತಿದೆ ನಗರ ಅಷ್ಟೇ ಅಲ್ಲ, ಹೊಸ ವರ್ಷಾಚರಣೆಯನ್ನೇ ನೆಪವಾಗಿಸಿಕೊಂಡು ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್‍ಗಳು, ಫೈವ್ ಸ್ಟಾರ್ ಹೋಟೆಲ್‍ಗಳು, ಪ್ರಸಿದ್ಧ ಹೋಟೆಲ್‍ಗಳು ನಾನಾ ಕಾರ್ಯಕ್ರಮಗಳನ್ನು ಕೂಡ ಆಯೋಜನೆ ಮಾಡಿವೆ. ಈಗಾಗಲೇ ಕೆಲವು ಹೋಟೆಲ್‍ಗಳಲ್ಲಿ ನೂತನ ವರ್ಷಾಚರಣೆಯ ಬುಕ್ಕಿಂಗ್ ಕೂಡ ಮುಗಿಸಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಗರದಲ್ಲಿ ಹೊಸ ವರ್ಷಾಚರಣೆಗೆ ಪ್ರಮುಖವಾದ ಕೇಂದ್ರವೇ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆ. ಇವೆರಡೂ ಈಗಾಗಲೇ ಬೆಳಕಿನಿಂದ ನವವಧುವಿನಂತೆ ಶೃಂಗಾರ ಗೊಂಡಿವೆ. ಈ ಶೃಂಗಾರದಲ್ಲಿ ಶಾಂತಿಯನ್ನು ಕಾಪಾಡಲು ಪೊಲೀಸರು ಕೂಡ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಅಷ್ಟೇ ಅಲ್ಲ ಕುಡಿದು ವಾಹನ ಚಲಾಯಿಸುವವರ ಮೇಲೂ ಖಾಕಿ ಕಣ್ಣಿಟ್ಟಿದೆ. ಹೀಗಾಗಿ ಪೊಲೀಸರು ಕುಡುಕರ ಮೇಲೆ ಭಾರಿ ನಿಗಾವನ್ನೇ ಇಟ್ಟಿದೆ.
ಮಧ್ಯರಾತ್ರಿತನಕ ಸುರಪಾನ!: ಮದ್ಯಪ್ರಿಯರಿಗೆ ಒಂದು ಸಿಹಿ ಸುದ್ದಿ. ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಅಂಗವಾಗಿ ಬೆಂಗಳೂರು ನಗರದಲ್ಲಿ ತಡರಾತ್ರಿ ಒಂದು ಗಂಟೆಯವರೆಗೆ ಬಾರ್ ರೆಸ್ಟೋರೆಂಟ್‍ಗಳು, ಕ್ಲಬ್‍ಗಳು ಮದ್ಯ ಮಾರಾಟ ಮಾಡಬಹುದು ಎಂದು ಸ್ಥಳೀಯ ಠಾಣೆ ಮತ್ತು ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. 31ರಿಂದ ಜನವರಿ 1ರವರೆಗೆ ಮಾತ್ರ ಈ ಅನುಮತಿ ಇರುತ್ತದೆ. ವೈನ್ ಮತ್ತು ಲಿಕ್ಕರ್ ಶಾಪ್‍ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.