ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೇನು 5 ದಿನ ಉಳಿದಿದ್ದು, ಇದೀಗ ದಕ್ಷಿಣ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಸೇಂಟ್ ಅಲ್‌ಫೋನ್‌ಸಾ ಚರ್ಚ್ ಮೇಲೆ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಡಿಸೆಂಬರ್ ತಿಂಗಳಿನಿಂದ 5 ನೇ ಬಾರಿ ಚರ್ಚ್ ಮೇಲೆ ದಾಳಿ ನಡೆದಿದೆ. ದರೋಡೆ ಮಾಡುವ ಸಲುವಾಗಿ ಚರ್ಚ್ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಕೇಸು ದಾಖಲಿಸಿದ್ದಾರೆ. ಆದರೆ ಆಗಂತುಕರು ಬಂದು ಪ್ರಧಾನ ಗೇಟ್‌ನ್ನು ಒಡೆದು, ಬೆಳಗ್ಗಿನ ಜಾವ 3.00 ಗಂಟೆಗೆ ಚರ್ಚ್ ಒಳಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದು ಚರ್ಚ್‌ನ ಸದಸ್ಯರು ಹೇಳಿದ್ದಾರೆ.
ದೆಹಲಿಯಲ್ಲಿರುವ ಚರ್ಚ್‌ಗಳಿಗೆ ಭದ್ರತೆ ನೀಡಬೇಕೆಂದು ಪೊಲೀಸರಲ್ಲಿ ಮನವಿ ಮಾಡಲಾಗಿತ್ತು, ಆದರೆ ಪೊಲೀಸರು ವಾರಕ್ಕೆ ಒಂದು ದಿನ ಪಟ್ರೋಲಿಂಗ್ ಮಾಡುತ್ತಾರೆಯೇ ವಿನಾ ಅದಕ್ಕಿಂತ ಹೆಚ್ಚಿನದ್ದೇನು ಮಾಡಿಲ್ಲ ಎಂದು ಫಾದರ್ ಮ್ಯಾಥ್ಯೂ ದೂರಿದ್ದಾರೆ.
ತಿಂಗಳ ಹಿಂದೆಯಷ್ಟೇ ದೆಹಲಿಯ ವಿಕಾಸ್‌ಪುರಿಯಲ್ಲಿರುವ ಚರ್ಚ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ 3 ಮಂದಿಯನ್ನು ಬಂಧಿಸಲಾಗಿತ್ತು.
ಚರ್ಚ್‌ಗಳ ಮೇಲೆ ಪದೇ ಪದೇ ದಾಳಿಯಾಗುತ್ತಿರುವುದರಿಂದ ಪುಂಡರು ಚರ್ಚ್‌ಗಳನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೆಹಲಿ ಆರ್ಚ್‌ಬಿಷಪ್ ಅನಿಲ್ ಜೆಟಿ ಕೌಟೋ ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್ ಗುಂಪುಗಳು ಪ್ರತಿಭಟನೆ ನಡೆಸಿದ್ದು, ಪಾರ್ಲಿಮೆಂಟ್‌ನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗೃಹಸಚಿವ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಿದ್ದರು.