ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ನಡುವೆ ಬೆಳೆಯುತ್ತಿರುವ ಉದ್ವೇಗದ ನಡುವೆ ಎರಡೂ ಪಕ್ಷಗಳ ಸಮನ್ವಯ ಸಮಿತಿ ಸಭೆ ಫೆಬ್ರವರಿ ೧೭ರಂದು ನಡೆಯಲಿದೆ.
ಈ ಸಭೆ ಮಧ್ಯಾಹ್ನ ನಡೆಯಲಿದೆ ಎಂದು ಶಿವಸೇನಾ ವಕ್ತಾರ ತಿಳಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯದ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಮತ್ತು ಸಹಕಾರಿ ಸಚಿವ ಚಂದ್ರಕಾಂತ್ ಪಾಟೀಲ್ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಕೈಗಾರಿಕಾ ಸಚಿವ ಸುಭಾಶ್ ದೇಸಾಯಿ, ಸಾರಿಗೆ ಸಚಿವ ದಿವಾಕರ್ ರಾವೋಟೆ ಮತ್ತು ರಾಜ್ಯ ಸಭಾ ಸದಸ್ಯ ಅನಿಲ್ ದೇಸಾಯಿ ಶಿವಸೇನೆಯನ್ನು ಪ್ರತಿನಿಧಿಸಲಿದ್ದಾರೆ.
ಮೈತ್ರಿ ಸರ್ಕಾರದ ಸರಾಗ ಆಡಳಿತಕ್ಕಾಗಿ ಆ ಸಮನ್ವಯ ಸಮಿತಿಯನ್ನು ರಚಿಸಲಾಗಿತ್ತು. ೧೯೯೫-೧೯೯೯ ರ ನಡುವಿನ, ಈ ಹಿಂದಿನ ಶಿವಸೇನಾ-ಬಿಜೆಪಿ ಸರ್ಕಾರ ಕೂಡ ಸಮನ್ವಯ ಸಮಿತಿ ಹೊಂದಿತ್ತು. ದಿವಂಗತ ಶಿವಸೇನೆಯ ಅಧ್ಯಕ್ಷ ಭಾಳಾ ಠಾಕ್ರೆ ಹಾಗೂ ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಈ ಸಮಿತಿಯಲ್ಲಿದ್ದರು.
ಈ ಕ್ಷಣದಲ್ಲಿ ಈ ಕೇಸರಿ ಪಕ್ಷಗಳ ಸಂಬಂಧ ಬಿಗಡಾಯಿಸಿದೆ. ದೆಹಲಿ ಚುನಾವಣೆಗಳಲ್ಲಿ ಬಿಜೆಪಿ ಸೋತ ನಂತರ ಶಿವಸೇನ ಬಿಜೆಪಿ ಪಕ್ಷವನ್ನು ತೀವ್ರವಾಗಿ ಟೀಕಿಸಿತ್ತು.