ನವದೆಹಲಿ: ಕಾರ್ಪೊರೇಟ್ ಬೇಹುಗಾರಿಕೆ ಸಂಬಂಧ ಬಂಧಿತರಾದ ಆರೋಪಿಗಳು, ತಾವು ರಕ್ಷಣಾ ಇಲಾಖೆ ಮಾಹಿತಿ ಕದ್ದಿಲ್ಲ ಎಂದು ಹೇಳಿಕೊಂಡಿದ್ದಾರೆ.
`ರಕ್ಷಣಾ ಸಚಿವಾಲಯದ ರಹಸ್ಯ ಮಾಹಿತಿ ಕದಿಯಲು ಪ್ರಯತ್ನಿಸಿದ್ದೆವಾದರೂ, ಅಲ್ಲಿನ ಕಚೇರಿಯ ಮಾದರಿಯೇ ವಿಭಿನ್ನವಾಗಿರುವ ಕಾರಣ ನಮ್ಮ ಯತ್ನ ಫಲಿಸಲಿಲ್ಲ' ಎಂದು ಪೆಟ್ರೋಲಿಯಂ ಸಚಿವಾಲಯದ ಬಂಧಿತ ನೌಕರರು ತಪ್ಪೊಪ್ಪಿಕೊಂಡಿದ್ದಾರೆ. ಇದೇ ವೇಳೆ, ಪ್ರಕರಣದ ವ್ಯವಸ್ಥಿತ ತನಿಖೆ ನಡೆಸಲು ಜಂಟಿ ಪೊಲೀಸ್ ಆಯುಕ್ತ ಯಾದವ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಲಾಗಿದೆ.
ಅಗತ್ಯ ಬಿದ್ದರೆ ಸೈಬರ್ ಘಟಕದ ಅಧಿಕಾರಿಗಳನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ಎನರ್ಜಿ ಕಂಪನಿಗಳ ಹಿರಿಯ ಅಧಿಕಾರಿಗಳ ದೂರವಾಣಿಗಳನ್ನು ಕದ್ದಾಲಿಸಿದ್ದು, ಇನ್ನೂ ಅನೇಕರ ಬಂಧನ ಖಚಿತ ಎನ್ನಲಾಗಿದೆ. ಜತೆಗೆ, ಕದ್ದ ಮಾಹಿತಿ ಪಡೆದವರು ಯಾವ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಿರುವ ಪೊಲೀಸರಿಗೆ 12 ಬ್ಯಾಂಕ್ ಖಾತೆಗಳು ಸಿಕ್ಕಿವೆ.
ರಾಷ್ಟ್ರೀಯ ಹಿತ ಕಡೆಗಣನೆ
ಐವರು ಅಧಿಕಾರಿಗಳಿಂದ ವಶಕ್ಕೆ ಪಡೆಯಲಾಗಿರುವ ದಾಖಲೆಗಳು `ರಾಷ್ಟ್ರೀಯ ಭದ್ರತಾ ವಿಚಾರ' ಕ್ಕೆ ಸಂಬಂಧಿಸಿದ್ದು. ಹಾಗಾಗಿ ಈ ಕೇಸಿನಲ್ಲಿ ಆರೋಪಿಗಳ ವಿರುದ್ಧ ಆಡಳಿತ ಗೋಪ್ಯತೆ ಕಾಯ್ದೆ(ಆಫೀಷಿಯಲ್ ಸೀಕ್ರೆಟ್ಸ್ ಆ್ಯಕ್ಟ್) ಪ್ರಕಾರವೂ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳು ರಾಷ್ಟ್ರೀಯ ಹಿತಾಸಕ್ತಿಯನ್ನೇ ಗಾಳಿಗೆ ತೂರಿದ್ದಾರೆ. ಜತೆಗೆ, ಈ ಎಲ್ಲ ಅಧಿಕಾರಿಗಳು ತಮ್ಮ ಹಿರಿಯ ಅಧಿಕಾರಿಗಳ ಆದೇಶದನ್ವಯ ಕದ್ದ ಮಾಹಿತಿ ಪಡೆದಿದ್ದಾರೆ ಎಂದೂ ಪೊಲೀಸರು ತಿಳಿಸಿದ್ದಾರೆ.
ತಪ್ಪುಗಳು ಬಹಿರಂಗ ಆಗಿಯೇ ಆಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿಸುವುದು ನಮ್ಮ ಉದ್ದೇಶ. ಭ್ರಷ್ಟ ಚಟುವಟಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ಎಲ್ಲ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎನ್ನುವುದೇ ಸರ್ಕಾರದ ಆಶಯ.
-ನಿರ್ಮಲಾ ಸೀತಾರಾಮನ್,
ವಾಣಿಜ್ಯ ಸಚಿವೆ
ಬೇಹು ಜಾಲ ಭೇದಿಸಿದ ದೆಹಲಿ ಪೊಲೀಸರ ಕಾರ್ಯ ಶ್ಲಾಘನೀಯ. ಸೋರಿಕೆಯಾದ ಮಾಹಿತಿಯಿಂದ ಯಾರಿಗೆ ಲಾಭವಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಬೇಕು.
-ಅರವಿಂದ ಕೇಜ್ರಿವಾಲ್,
ದೆಹಲಿ ಮುಖ್ಯಮಂತ್ರಿ