ಶಿವಗಂಗ: ಶಿವಗಂಗಾದ ಗಾಂಧಿನಗರದ ಬಾರ್ ಒಂದರಲ್ಲಿ ಸಣ್ಣ ಪ್ರಮಾಣದ ಪೈಪ್ ಬಾಂಬ್ ಒಂದರನ್ನು ನಿಷ್ಕ್ರಿಯಗೊಳಿಸುವಲ್ಲಿ ಪೋಲಿಸರು ಸಫಲರಾಗಿದ್ದು, ಸ್ಫೋಟವನ್ನು ತಪ್ಪಿಸಿದ್ದಾರೆ.
ಅನಾಥವಾಗಿ ಬಿದ್ದಿದ್ದ ಚೀಲವೊಂದನ್ನು ನೋಡಿದ ಟಿ ಎ ಎಸ್ ಎಂ ಎ ಸಿ ಬಾರ್ ಮಾಲೀಕ ಮುಥುರಮಾಲಿಂಗಮ್ ಅವರಿಗೆ ಅನುಮಾನ ಬಂದು ಪೋಲಿಸರಿಗೆ ತಿಳಿಸಿದ್ದಾರೆ. ಎಸ್ ಪಿ ಅಶ್ವಿನ್ ಎಂ ಕೊಟ್ನಿಸ್ ನಾಯಕತ್ವದಲ್ಲಿ ಬಂದ ಪೊಲೀಸ್ ತಂಡ, ಲೋಹ ಪತ್ತೆ ಯಂತ್ರದ ಮೂಲಕ ಈ ಬಟ್ಟೆಯ ಚೀಲವನ್ನು ತಪಾಸಣೆ ಮಾಡಿ ಅದರಲ್ಲಿ ಬಾಂಬ್ ಇರುವುದನ್ನು ದೃಢೀಕರಿಸಿದ್ದಾರೆ. ನಂತರ ಮುಧುರೈನಿಂದ ಬಂದ ಬಾಂಬ್ ನಿಷ್ಕ್ರಿಯ ದಳ ಬಾಂಬನ್ನು ನಿಷ್ಕ್ರಿಯಗೊಳಿಸಿದೆ.
೧೦ ಸೆಂಟಿಮೀಟರ್ ಉದ್ದ ಮತ್ತು ೯ ಸೆಂಟಿಮೀಟರ್ ಅಗಲವಿದ್ದ ಈ ಪೈಪ್ ಬಾಂಬ್, ಪ್ಲಾಸ್ಟಿಕ್ ಊಟದ ಡಬ್ಬಿಯಲ್ಲಿ ಟೈಮರ್ ಜೊತೆ ಇಡಲಾಗಿತ್ತು. ಸುಮಾರು ೧೧ ಘಂಟೆಗೆ ಬಂದ ಬಾಂಬ್ ನಿಷ್ಕ್ರಿಯ ದಳಕ್ಕೆ ೨ ಘಂಟೆಯ ಹೊತ್ತಿಗೆ ಆ ವೈರ್ ಗಳನ್ನು ಬೇರ್ಪಡಿಸಲು ಸಾಧ್ಯವಾಗಿದೆ.
ಈ ಬಾಂಬ್ ಸಣ್ಣ ಪ್ರಮಾಣದ್ದಾದರೂ, ಹಿಂದೆ ಮಧುರೈ ನಲ್ಲಿ ನಿಷ್ಕ್ರಿಯಗೊಳಿಸಿದ್ದ ಬಾಂಬ್ ಗಳ ಮಾದರಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಬ್ ನಲ್ಲಿ ದಿಟೊನೇಟರ್ ಬಳಸದಿದ್ದರೂ, ದೊಡ್ಡ ವೋಲ್ಟೇಜ್ ಬ್ಯಾಟರಿಯೊಂದನ್ನು ಬಳಸಿದ್ದರಿಂದ ಅಕಸ್ಮಾತ್ ಸ್ಫೋಟಗೊಂಡಿದ್ದರೆ ಗಮನೀಯವಾದ ಹಾನಿ ಉಂಟು ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.