ಪ್ರಧಾನ ಸುದ್ದಿ

ಪಾಕ್ ಗುಂಡಿನ ದಾಳಿ ಅಬಾಧಿತ: ಗಡಿ ಗ್ರಾಮಗಳಿಂದ ೭ ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Guruprasad Narayana

ಜಮ್ಮು:ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿರುವ ಮುಂದುವರೆದ ಗುಂಡಿನ ದಾಳಿಯಲ್ಲಿ, ಗಡಿಯಲ್ಲಿರುವ  ಸಾಂಬಾ ಮತ್ತು ಕತುವಾ ಜಿಲ್ಲೆಗಳಲ್ಲಿ ನೆಲೆಸಿರುವ ೭೦೦೦ ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ತಾಣಗಳಿಗೆ ಕೊಂಡೊಯ್ಯಲಾಗುತ್ತಿದೆ.

ಸ್ಥಳಾಂತರಗೊಂಡವರಿಗೆ ಆಶ್ರಯ ನೀಡಲು ಜಿಲ್ಲಾಡಳಿತ ತುರ್ತು ಪಡೆಯನ್ನು ಸನ್ನದ್ಧವಾಗಿಟ್ಟಿದ್ದು ೪೩೦೦ಕ್ಕೂ ಹೆಚ್ಚು ಜನ ಸುರಕ್ಷಿತ ಪ್ರದೇಶಗಳಿಗೆ ವಲಸೆ ಬಂದು ಆಶ್ರಯ ಪಡೆದಿದ್ದಾರೆ ಎಂದು ಕತುವಾ ಜಿಲ್ಲೆಯ ಉಪ ಆಯುಕ್ತ ಶಾಹಿದ್ ಇಕ್ಬಾಲ್ ಚೌದರಿ ತಿಳಿಸಿದ್ದಾರೆ. ಇದಕ್ಕಾಗಿ ತಾತ್ಕಾಲಿಕ ಡೇರೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಗಡಿಯ ಸಾಂಬಾ ಜಿಲ್ಲೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಸುಮಾರು ೩೧೦೦ ಜನ ತಮ್ಮ ಮನೆಗಳನ್ನು ತೊರೆದು, ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಗುಳೆ ಹೊರಟಿರುವ ಸಂತ್ರಸ್ತ ನಿವಾಸಿಗಳಿಗೆ ಸೇನೆ ಕೂಡ ಸಹಾಯಹಸ್ತ ಚಾಚಿದೆ. ಗಡಿಯಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲು ಸೇನೆ ತನ್ನ ವಾಹನಗಳನ್ನು ನೀಡುತ್ತಿದೆ.

ಕತುವಾ ಜಿಲ್ಲೆಯಲ್ಲಿ ಪಾಕಿಸ್ತಾನ ನಡೆಸಿರುವ ದಾಳಿಯಲ್ಲಿ ಸುಮಾರು ಐದು ಸಾಕು ಪ್ರಾಣಿಗಳು ಹತನಾಗಿದ್ದು, ೧೨ ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT