ಶ್ರೀನಗರ: ಪದ್ಮ ಪ್ರಶಸ್ತಿಗಾಗಿ ಆಟಗಾರರು ಲಾಬಿ ನಡೆಸಬೇಕಾಗಿ ಬರುವುದು ಹಾಗೂ ಪರಸ್ಪರ ಸೆಣಸಾಡುವುದು ಖೇದಕರ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ಮಂಗಳವಾರ ನನಗೂ ಪದ್ಮ ವಿಭೂಷಣ ಪ್ರಶಸ್ತಿ ನೀಡುವಂತೆ ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿ ಎಂದು ಬಾಕ್ಸಿಂಗ್ ಫೆಡರೇಷನ್‌ಗೆ ವಿನಂತಿಸಿರುವ ಸುದ್ದಿ ಬಗ್ಗೆ ಓಮರ್ ಅಬ್ದುಲ್ಲಾ ಈ ಪ್ರತಿಕ್ರಿಯೆ ನೀಡಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಪದ್ಮ ಭೂಷಣ ಪ್ರಶಸ್ತಿ ನನಗೂ ನೀಡಿ ಎಂದು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ದನಿಯೆತ್ತಿದ್ದು, ಕ್ರೀಡಾ ಸಚಿವಾಲಯ ಆಕೆಯ ಹೆಸರನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು.
ಖ್ಯಾತ ಕ್ರೀಡಾಪಟುಗಳು ಪದ್ಮ ಪ್ರಶಸ್ತಿಯ ಸರತಿ ಸಾಲಿನಲ್ಲಿ ನಿಲ್ಲಲು ಪರಸ್ಪರ ಗುದ್ದಾಟ ಮಾಡುತ್ತಿರುವುದು ಖೇದಕರ ಎಂದು ಓಮರ್ ಅಬ್ದುಲ್ಲಾ ಟ್ವೀಟರ್‌ನಲ್ಲಿ ಬರೆದಿದ್ದಾರೆ.
ಇಂಥಾ ಪ್ರಶಸ್ತಿಗಳಿಗೆ ಸಾಧನೆಯೇ ಮಾನದಂಡವಾಗಿರಬೇಕು ಎಂದು ಹೇಳಿದ ಓಮರ್, ಪ್ರಶಸ್ತಿಗಾಗಿ ಲಾಬಿ ನಡೆಸುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.