ಬ್ಯಾಂಗ್ಕಾಕ್: ಇಪ್ಪತ್ತು ವರ್ಷಗಳ ಹಿಂದೆ ಭಾರತದಲ್ಲಿ ಬಾಂಬ್ ಸ್ಫೋಟ ನಡೆಸಿದ್ದ ಪಾಕಿಸ್ತಾನಿಯನ್ನು ಥಾಯ್ಲ್ಯಾಂಡ್ ಪೊಲೀಸರು ಬಂಧಿಸಿದ್ದಾರೆ. ೧೯೯೫ ರಲ್ಲಿ ನಡೆದ ಈ ದಾಳಿಯಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿಯೂ ಸೇರಿದಂತೆ ಕನಿಷ್ಠ ೧೫ ಜನ ಮೃತಪಟ್ಟಿದ್ದರು.
ಈ ೧೯೯೫ರ ಸ್ಫೋಟದಲ್ಲಿ ಜಗ್ತಾರ್ ಸಿಂಗ್ ಸೇರಿದಂತೆ ೬ ಉಗ್ರಗಾಮಿಗಳನ್ನು ತಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿತ್ತು. ೨೦೦೭ ರಲ್ಲಿ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸುವುದಕ್ಕೂ ಮುಂಚೆಯೇ ೨೦೦೪ ರಲ್ಲಿ ಪಂಜಾಬ್ ನ ಜೈಲಿನಿಂದ ಪರಾರಿಯಾಗಿದ್ದನು.
ಜಗ್ತಾರ್ ಸಿಂಗ್ ಅಕ್ಟೋಬರ್ ನಲ್ಲಿ ಥಾಯ್ಲ್ಯಾಂಡ್ ಗೆ ಬಂದಿದ್ದು, ಸೋಮವಾರ ಅವನನ್ನು ಬಂಧಿಸಲಾಗಿದೆ ಎಂದು ಥಾಯ್ ದೇಶದ ಪೋಲೀಸ್ ವಕ್ತಾರ ಲೆಫ್ಟಿನೆಂಟ್ ಜನರಲ್ ಥವೋರ್ನಿಸಿರಿ ತಿಳಿಸಿದ್ದಾರೆ.
37 ವರ್ಷದ ಪಾಕಿಸ್ತಾನಿಯನ್ನು ಭಾರತದ ವಶಕ್ಕೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
೧೯೯೫ರಲ್ಲಿ ಈ ದಾಳಿಯಲ್ಲಿ ಮೃತಪಟ್ಟಿದ್ದ ಬೇಅಂತ್ ಸಿಂಗ್ ಪಂಜಾಬ್ ನ ಮುಖ್ಯಮಂತ್ರಿಯಾಗಿದ್ದರು. ೧೯೯೨ ರಲ್ಲಿ ಅಧಿಕಾರಕ್ಕೆ ಬಂದಿದ್ದ ಅವರು ಸಿಖ್ ಉಗ್ರಗಾಮಿಗಳನ್ನು ಇನ್ನಿಲ್ಲದಂತೆ ಮಟ್ಟ ಹಾಕಿದ್ದರು. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಹಲವಾರು ಸಿಖ್ ಉಗ್ರಗಾಮಿಗಳನ್ನು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು.