ವೃಂದಾವನ: ಬಾಂಕೆ ಬಿಹಾರಿ ಮಂದಿರದ ಬಳಿ, ಯಗ್ನಶಾಲಾ ಆವರಣದಲ್ಲಿ ೩ ಯುವಕರು ಮೃತಪಟ್ಟಿರುವುದು ಶುಕ್ರವಾರ ಬೆಳಗ್ಗೆ ತಿಳಿದುಬಂದಿದೆ.
ಮಥುರಾದ ಮಾಂತ್ ಥೆಹ್ಸಿಲ್ ನ ಜಹಂಗಿಪುರದ ಮನೋಜ್, ಆಕಾಶ್ ಮತ್ತು ಕಲ್ಯಾಣ್ ಮೃತಪಟ್ಟ ಯುವಕರು ಎಂದು ಗುರುತಿಸಲಾಗಿದೆ.
ಯಗ್ನಶಾಲವನ್ನು ನಡೆಸುವ ಪೂಜಾರಿಯೇ ಈ ಕೊಲೆಗಳನ್ನು ಮಾಡಿರುವುದು ಎಂದು ಆರೋಪಿಸಿ, ಕುಟುಂಬದ ಸದಸ್ಯರು ಮತ್ತು ಕುಪಿತ ಗ್ರಾಮಸ್ಥರು ಯಗ್ನಶಾಲ ಪ್ರದೇಶವನ್ನು ಧ್ವಂಸಗೊಳಿಸಿದ್ದಾರೆ. ಆಶ್ರಮದ ಸಹಾಯಕ್ಕಾಗಿ ಈ ಹುಡುಗರನ್ನು ನೇಮಿಸಿಕೊಂಡಿದ್ದು, ಅರ್ಚಕರು ನೀಡುತ್ತಿದ್ದ ಹಿಂಸೆಯನ್ನು ನಮಗೆ ದೂರವಾಣಿ ಕರೆಯ ಮೂಲಕ ಆಗಾಗ ವಿವರಿಸುತ್ತಿದ್ದರು ಎಂದು ಕುಟುಂಬ ಸದಸ್ಯರು ದೂರಿದ್ದಾರೆ.
ಇಲ್ಲಿ ಯಾವುದೋ ಪಿತೂರಿ ನಡೆದಿರುವುದು ಮೇಲ್ನೋಟಕ್ಕೆ ಕಂಡರೂ, ಮರಣೋತ್ತರ ಪರೀಕ್ಷೆಯ ನಂತರವೆ ಖಚಿತ ನಿರ್ಧಾರಕ್ಕೆ ಬರಬಹುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ತೀರ್ಥಕ್ಷೇತ್ರದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಗ್ರಾಮಸ್ಥರನ್ನು ಸಮಾಧಾನ ಪಡಿಸಲು ಯತ್ನಿಸಲಾಗುತ್ತಿದೆ ಹಾಗೆಯೇ ಭದ್ರತೆಗೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.