ಹೈದರಾಬಾದ್: ನಿನ್ನೆ ಹೈದರಾಬಾದ್‌ನಲ್ಲಿ ಬಂಧನಕ್ಕೊಳಗಾಗಿರುವ ಇಸಿಸ್ ಸೇರಲು ಬಯಸಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸಿರಿಯಾಗೆ ತೆರಳಿ ಅಲ್ಲಿ ಉಗ್ರ ತರಬೇತಿ ಪಡೆದು ಪುನಾ ಭಾರತಕ್ಕೆ ಬಂದು ದುಷ್ಕೃತ್ಯಗಳನ್ನು ಎಸಗಲು ಸಿದ್ಧತೆ ನಡೆಸಿದ್ದ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ದುಬೈ ಮೂಲಕ ಸಿರಿಯಾ ತೆರಳುತ್ತಿದ್ದ ಹೈದರಾಬಾದ್‌ನ ಆಸಿಫ್‌ನಗರದ ನಿವಾಸಿ ಸಲ್ಮಾನ್ ಮೊಯಿನುದ್ದೀನ್(32)ನನ್ನು ಶುಕ್ರವಾರ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿಲಾಗಿತ್ತು. ಬಂಧಿತ ಸಲ್ಮಾನ್‌ನನ್ನು ತೆಲಂಗಾಣ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕಳೆದ ವರ್ಷ ಅಮೆರಿಕದಿಂದ ಭಾರತಕ್ಕೆ ವಾಪಸ್ ಬಂದಿದ್ದ ಸಲ್ಮಾನ್, ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯೆವಾಗಿದ್ದುಕೊಂಡು ಉಗ್ರ ಸಂಘಟನೆಗಳ ಕಡೆ ಯುವಕರನ್ನು ಸೆಳೆಯಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಸಿರಿಯಾದಲ್ಲಿ ಉಗ್ರ ತರಬೇತಿ ಪಡೆದು ಬಂದು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಉದ್ದೇಶ ಹೊಂದಿರುವ ಸಂಗತಿ ವಿಚಾರಣೆ ವೇಳೆ ಬಹಿರಂಗವಾಗಿದೆ.