ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತದಾರರಿಗೆ ಲಂಚ ತೆಗೆದುಕೊಳ್ಳಲು ಕರೆ ಕೊಟ್ಟಿರುವ ಹಿನ್ನಲೆಯಲ್ಲಿ, ಕೇಜ್ರಿವಾಲ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಅಜಯ್ ಮಾಕೆನ್ ಸೋಮವಾರ ತಿಳಿಸಿದ್ದಾರೆ.
"ನಮ್ಮ ಕಾನೂನು ವಿಭಾಗ, ಕೇಜ್ರಿವಾಲ್ ಅವರು ಜನವರಿ ೧೮ ರಂದು ಮಾಡಿದ ಹೇಳಿಕೆಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಹೇಳಿಕೆ ಅಸಂಬದ್ಧವಷ್ಟೆ ಅಲ್ಲ ಅಸಂವಿಧಾನಕ ಕೂಡ. ಜನರನ್ನು ಲಂಚ ತೆಗೆದುಕೊಳ್ಳಿ ಎಂದು ಹೇಳುವುದು ಅವರಿಗೆ ಲಂಚ ನೀಡುವುದಕ್ಕೆ ಸಮ" ಎಂದಿದ್ದಾರೆ.
ಫೆಬ್ರವರಿ ೭ ರಂದು ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಹಣ ಪಡೆದು ಆಪ್ ಪಕ್ಷಕ್ಕೆ ಮತ ಹಾಕುವಂತೆ ಅರವಿಂದ್ ಕೇಜ್ರಿವಾಲ್ ಕರೆ ಕೊಟ್ಟಿದ್ದರು.