ನಾಮಕ್ಕಲ್: ಪಲ್ಲಿಪಾಳ್ಯಮ್ ರೈಲ್ವೇ ಟ್ರ್ಯಾಕ್ ನಲ್ಲಿ ಜೂನ್ ೨೭ ರಂದು ಕಂಡುಬಂದ ದಲಿತ ಎಂಜಿನಿಯರ್ ಪ್ರಕರಣ ಬರೀ ಅಸಹಜ ಸಾವಲ್ಲ, ಕೊಲೆ ಎಂದಿದ್ದು ಗುರುವಾರ ೬ ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನಗೊಂಡವರಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ಕೂಡ ಎಂದು ಪೊಲೀಸ್ ತಿಳಿಸಿದ್ದು ಇನ್ನೂ ಮೂವರಿಗೆ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಗೋಕುಲ್ ರಾಜ್(೨೬) ಅವರ ಸಾವಿನಿಂದ ಆಕ್ರೋಶಗೊಂಡಿದ್ದ ಕುಟುಂಬ ವರ್ಗ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಜೂನ್ ೨೯ ರಿಂದ ಅನಿರ್ಧಿಷ್ಟ ಕಾಲಾವಧಿಯವರೆಗೆ ಉಪವಾಸ ಪ್ರತಿಭಟನೆ ಮಾಡುತ್ತಿದ್ದರು.
ಮೃತ ಯುವಕ ಅನ್ಯ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದರಿಂದ ಈ ಕೊಲೆ ಮಾಡಲಾಗಿದೆ ಎಂಬ ಗುಮಾನಿ ಕೂಡ ದಟ್ಟವಾಗಿದೆ.
ಬಂಧನದ ಸುದ್ದಿ ತಿಳಿದ ನಂತರ ಉಪವಾಸವನ್ನು ಕೈಬಿಟ್ಟಿರುವ ಕುಟುಂಬ ವರ್ಗ ಕಳೇಬರವನ್ನು ಸ್ವೀಕರಿಸಿದೆ.
ಈ ಹಿಂದೆ ಪೊಲೀಸರು ಇದನ್ನು ಅಸಹಜ ಸಾವು ಎಂದಷ್ಟೇ ಬಗೆದಿದ್ದರು ಆದರೆ ಗೋಕುಲ್ ರಾಜ್ ಅವರ ಗೆಳೆಯನ ಮನವಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ತಂಡ ರಚಿಸಿ ಶವ ಪರೀಕ್ಷೆ ನಡೆಸಿ ವರದಿ ಒಪ್ಪಿಸಲು ನಿರ್ದೇಶಿಸಿದ ಮೇಲೆ ಪೊಲೀಸರು ಇದನ್ನು ಅಪಹರಣ ಮತ್ತು ಕೊಲೆ ಪ್ರಕರಣ ಎಂದು ಬದಲಾಯಿಸಿದ್ದಾರೆ.
ಯುವಕನ ಪ್ರೇಮ ಪ್ರಕರಣ ಅವನ ಕೊಲೆಗೆ ಕಾರಣವಾಗಿದೆ ಎಂದು ಡಿ ಐ ಜಿ ವಿದ್ಯಾ ಕುಲಕರ್ಣಿ ತಿಳಿಸಿದ್ದಾರೆ.