ಪ್ರಧಾನ ಸುದ್ದಿ

ಪೊಲೀಸರ ಅಚಾತುರ್ಯ: ಆರೋಪಿಗಳಿಂದ ಬಾಲಕಿ ಮೇಲೆ ಎರಡನೇ ಬಾರಿ ಅತ್ಯಾಚಾರ

Guruprasad Narayana

ಜಲ್ನ(ಮಹಾರಾಷ್ಟ್ರ): ಜಲ್ನ ನಗರದಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ, ರೇಪ್ ಆರೋಪಿಗಳನ್ನು ಹಿಡಿಯಲು ೧೭ ವರ್ಷದ ರೇಪ್ ಸಂತ್ರಸ್ತೆ ಪೋಲೀಸರ ಸೂಚನೆ ಮೇರೆಗೆ ಅದೇ ಆರೋಪಿಗಳನ್ನು ಭೇಟಿ ಮಾಡಲು ಹೋಗಿ ಮತ್ತೆ ರೇಪ್ ಗೆ ಒಳಗಾದ ಘಟನೆ ಬೆಚ್ಚಿಬೀಳಿಸಿದೆ.

ಬಾಲಕಿ ನೆನ್ನೆ ಸಂಜೆ ಮತ್ತೆ ಅತ್ಯಾಚಾರಕ್ಕೆ ಒಳಗಾಗಿರುವುದರಿಂದ, ಈ ಕಾರ್ಯಾಚರಣೆಯನ್ನು ಆಯೋಜಿಸಿದ ಸಹ ಪೊಲೀಸ್ ಇನ್ಸ್ಪೆಕ್ಟರ್ ವಿನೋದ್ ಎಜ್ಜಾಪ್ವರ್ ಅವರನ್ನು ಹಿರಿಯ ಅಧಿಕಾರಿಗಳು ವಜಾ ಮಾಡಿದ್ದಾರೆ. ಅತ್ಯಾಚಾರ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಜುಲೈ ೭ ರಂದು ೨೦ ವರ್ಷದ ಇಬ್ಬರು ಯುವಕರು ಬಾಲಕಿ ಮತ್ತು ಅವನ ಗೆಳೆಯನನ್ನು ಅಪಹರಿಸಿ, ಚಾಕು ತೋರಿಸಿ ಬೆದರಿಸಿ ಕಾಡಿಗೆ ಕೊಂಡೊಯ್ದು ಅತ್ಯಾಚಾರ ಮಾಡಿದ್ದಾರೆ. ಬಾಲಕಿಯ ಮೊಬೈಲ್ ಫೋನ್ ಕಸಿದು ಈ ಕೃತ್ಯದ ವಿಡಿಯೋ ಕೂಡ ಚಿತ್ರೀಕರಿಸಿದ್ದಾರೆ.

ನಂತರ ಮನೆಗೆ ತೆರಳಿದ ಬಾಲಕಿ ಈ ವಿಷಯವನ್ನು ತನ್ನ ತಾಯಿಗೆ ಹೇಳಿಕೊಂಡಿದ್ದು, ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಇಬ್ಬರು ಆರೋಪಿಗಳು ತಾಯಿಯ ಮೊಬೈಲ್ ಫೋನಿಗೆ ಕರೆ ಮಾಡಿ ಫೋನು ಮತ್ತು ವಿಡಿಯೋ ಕ್ಲಿಪ್ ಹಿಂದಿರುಗಿಸಬೇಕೆಂದರೆ 2 ಸಾವಿರ ರೂ. ಕೊಡಬೇಕೆಂದು ಆಗ್ರಹಿಸಿದ್ದಾರೆ. ನಂತರ ಕಳೆದ ಸಂಜೆ ಫೋನ್ ವಾಪಸ್ ತೆಗೆದುಕೊಳ್ಳಲು ಫ್ಲೈ ಓವರ್ ಬಳಿ ಬರಲು ಬಾಲಕಿಗೆ ಆರೋಪಿಗಳು ತಿಳಿಸಿದ್ದಾರೆ.

ಆರೋಪಿಗಳನ್ನು ಹಿಡಿಯಲು ಪೊಲೀಸರು ಸಂಚು ಹೂಡಿ, ಬಾಲಕಿಗೆ ಅಲ್ಲಿಗೆ ತೆರಳುವಂತೆ ಸೂಚಿಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಾಲಕಿ ಧಾವಿಸುತ್ತಿದ್ದಾಗ ಆರೋಪಿಗಳು ಬಾಲಕಿಯನ್ನು ಮತ್ತೆ ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ.

ಬಾಲಕಿ ಪೋಲೀಸರ ಬಳಿ ಮತ್ತೆ ತೆರಳಿದಾಗ, ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಫೋನ್ ವಶಪಡಿಸಿಕೊಂಡಿದ್ದಾರೆ. ಆದರೆ ಆ ಫೋನಿನಲ್ಲಿ ಯಾವುದೇ ಅಸಭ್ಯ ವಿಡಿಯೋ ಇಲ್ಲ ಎಂದಿದ್ದಾರೆ.

ಈ ವಿಷಯದ ಗಂಭೀರತೆ ಅರಿತ ಪ್ರಧಾನ ಪೋಲಿಸ್ ಇನ್ಸ್ ಪೆಕ್ಟರ್ ವಿಶ್ವಾಸ್ ನಂಗ್ರೆ ಪಾಟೀಲ್ ಅವರು ಠಾಣೆಗೆ ಧಾವಿಸಿ ಸಹ ಪೋಲಿಸ್ ಇನ್ಸ್ ಪೆಕ್ಟರ್ ನನ್ನು ಕೆಲಸದಿಂದ ವಜಾ ಮಾಡಲು ಆದೇಶಿಸಿದ್ದಾರೆ. ಆರೋಪಿಗಳ ಹೆಸರನ್ನು ಬಹಿರಂಗ ಪಡಿಸದ ಪೊಲೀಸರು ಹೆಚ್ಚಿನ ತನಿಖೆಗೆ ನಡೆಸಿದ್ದಾರೆ. 

SCROLL FOR NEXT