ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ, ಎಚ್.ಲ್. ಶಿವಲಿಂಗೇಗೌಡ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದಾಗ ರೈತನ ತಾಯಿಯನ್ನು ಸಂತೈಸಿದ ಕ್ಷಣ. 
ಪ್ರಧಾನ ಸುದ್ದಿ

ಸಾಲ ವಸೂಲಿಗೆ ತಡೆ: ರೈತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ

ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಸಹಕಾರ ಸಂಘಗಳು ರೈತರ ಸಾಲ ವಸೂಲಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...

ಮಂಡ್ಯ/ಮೈಸೂರು: ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಯಾವುದೇ ಸಹಕಾರ ಸಂಘಗಳು ರೈತರ ಸಾಲ ವಸೂಲಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಾಲಬಾಧೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂದ ಅವರು, ಅಧಿವೇಶನ ಮುಗಿದ ಬಳಿಕ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡುತ್ತೇನೆ ಎಂದಿದ್ದಾರೆ. ಅಲ್ಲದೆ ರೈತರ ಆತ್ಮಹತ್ಯೆಗಳಿಗೆ ಕಾರಣ ತಿಳಿಯುವ ಸಲುವಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ. ಮಂಡ್ಯ ಮತ್ತು ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ನಿವಾಸಗಳಿಗೆ ಭೇಟಿ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೂ ತಿರುಗೇಟು ನೀಡಿದರು.

ಯಕ್ಷ ಪ್ರಶ್ನೆಯಾದ ಆತ್ಮಹತ್ಯೆಗಳು:
ರಾಜ್ಯಾದ್ಯಂತ ರೈತರ ಸರಣಿ ಆತ್ಮಹತ್ಯೆಗಳು ಯಾವ ಕಾರಣಕ್ಕಾಗಿ ನಡೆಯುತ್ತಿವೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ತಿಳಿಯಲೇಬೇಕು. ಈ ಮೂಲಕ ಯಕ್ಷ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲೇಬೇಕು. ರೈತರ ನೆರವಿಗೆ ಸರ್ಕಾರ ಧಾವಿಸಲಿದೆ ಎಂದು ಸಿಎಂ ಹೇಳಿದರು. ರೈತರ ಸಾವಿಗೆ ಹಲವಾರು ಕಾರಣಗಳಿವೆ. ಆ ಕಾರಣಗಳು ಯಾವುವು, ಅವುಗಳಿಗೆ ಪರಿಹಾರಗಳು ಏನು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಮಗ್ರ ಅಧ್ಯಯನ ಮಾಡಿ ವರದಿ ಸಲ್ಲಿಸಲು ತಜ್ಞರ ಸಮಿತಿಯೊಂದನ್ನು ನೇಮಕ ಮಾಡಲಾಗುವುದು. ಅದರ ಜೊತೆಯಲ್ಲಿ ಕೃಷಿ ನೀತಿಗೆ ಸಂಬಂಧಿಸಿದಂತೆ ಡಾ. ಸ್ವಾಮಿನಾಥನ್ ನೇತೃತ್ವದಲ್ಲಿ ಕೃಷಿ ತಜ್ಞರ ಸಮಿತಿ ರಚಿಸಿ ಎರಡೂ ವರದಿ ತರಿಸಿಕೊಳ್ಳಲಾಗುವುದು.

ರೈತರ ಆತ್ಮಹತ್ಯೆ ಇಂದು ನೆನ್ನೆಯದಲ್ಲ. ಮೊದಲಿನಿಂದಲೂ ಇರುವಂಥದ್ದು. ಆದರೆ, ಈ ಬಾರಿ ಜೂನ್, ಜುಲೈ ತಿಂಗಳಲ್ಲಿ ಹೆಚ್ಚಾಗಿದೆ. ಇದಕ್ಕೆ ಕಾರಣಗಳು ಏನು, ಅದರಲ್ಲೂ ಮಂಡ್ಯ ಮೈಸೂರು ಭಾಗದಲ್ಲಿ ಹೆಚ್ಚೇಕೆ. ಬೇರೆ ಯಾವುದೇ ಜಿಲ್ಲೆಯಲ್ಲಿ ಇಷ್ಟೊಂದು ಅನಾಹುತಗಳು ಸಂಭವಿಸುತ್ತಿಲ್ಲ. ಸಮಸ್ಯೆಗಳ ಮೂಲ ಕಾರಣ ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು. ಸದ್ಯ ಸಾಲ ವಸೂಲಿ ಇಲ್ಲ: ರಾಜ್ಯದ ರೈತರು ಸಾಲದಿಂದ ಬಸವಳಿದಿದ್ದಾರೆ. ರೈತರ ನೆರವಿಗೆ ಧಾವಿಸುವ ಸರ್ಕಾರ ಸಹಕಾರ ಸಂಘಗಳ ಮೂಲಕ ಮಾಡಿರುವ ಯಾವುದೇ ಸಾಲವನ್ನು ಸದ್ಯಕ್ಕೆ ವಸೂಲು ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಹೇಳಿದರು.

ರೈತನ ಆತ್ಮಹತ್ಯೆಗೆ ಬಹುದೊಡ್ಡ ಕಾರಣ ಸಾಲ ಇರಬಹುದು. ಹಾಗಾಗಿ ನಾವು ಮೊದಲ ಹಂತದಲ್ಲಿ ಸಹಕಾರ ಸಂಘ ಮತ್ತು ಸೊಸೈಟಿಗಳಲ್ಲಿ ರೈತರು ಮಾಡಿದ ಯಾವುದೇ ಸಾಲವನ್ನು ಸದ್ಯಕ್ಕೆ ವಸೂಲು ಮಾಡದಂತೆ ಸೂಚಿಸಿದ್ದೇವೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ ಸಾಲಕ್ಕೆ ನೋಟಿಸ್ ನೀಡದಂತೆ ತಾಕೀತು ಮಾಡಿದ್ದೇವೆ. ಅಲ್ಲದೇ ಲೇವಾದೇವಿಗಾರರ ಬಳಿ ರೈತರು ಮಾಡಿದ ಸಾಲವನ್ನು ಒತ್ತಾಯದಿಂದ ವಸೂಲು ಮಾಡದಂತೆ ತಡೆಯಲು ಹಲವಾರು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಎಸ್.ಎಂ. ಕೃಷ್ಣಗೆ ತಿರುಗೇಟು:

ರೈತರ ಆತ್ಮಹತ್ಯೆ ತಡೆಗೆ 2002ರಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಡಾ. ವೀರೇಶ್ ವರದಿಯನ್ನು ಸಿದ್ಧಪಡಿಸಲಾಗಿತ್ತು. ಆ ಸಮಯದಲ್ಲಿ ವರದಿ ಅನುಷ್ಠಾನಕ್ಕೆ ರೈತರೇ ವಿರೋಧ ಮಾಡಿದ್ದರು. ಬಹುಶಃ ಮಾಜಿ ಮುಖ್ಯಮಂತ್ರಿ ಕೃಷ್ಣ ಅವರಿಗೆ ಅವೆಲ್ಲ ಮರೆತುಹೋಗಿದೆ. ಆ ವರದಿ ಅನುಷ್ಠಾನ ಮಾಡಿದರೆ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂಬ ಅಭಿಪ್ರಾಯ ಆಗಲೇ ವ್ಯಕ್ತವಾಗಿತ್ತು. ಹೀಗಾಗಿ ಆ ವರದಿಯನ್ನು ಕೈ ಬಿಡಲಾಗಿತ್ತು. ವೀರೇಶ್ ವರದಿಯ ಅನುಷ್ಠಾನದ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನ ಬಳಿಕ ಭೇಟಿ:
ಆತ್ಮಹತ್ಯೆ ಮಾಡಿಕೊಂಡ ಎಲ್ಲ ರೈತರ ಮನೆಗಳಿಗೆ ವಿಧಾಮಂಡಲದ ಅಧಿವೇಶನ ಬಳಿಕ ಹಂತ ಹಂತವಾಗಿ ಭೇಟಿ ನೀಡುತ್ತೇನೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಹಾದಿ ಹಿಡಿಯಬಾರದು. ಸಾಲಬಾಧೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ಈಗ ಈ ಎರಡು ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಮುಂದೆ ಆತ್ಮಹತ್ಯೆ ಮಾಡಿಕೊಂಡ ರೈತರ ಎಲ್ಲ ಗ್ರಾಮಗಳಿಗೂ ಭೇಟಿ ನೀಡುವೆ. ಆತ್ಮಹತ್ಯೆ ತಡೆಗೆ ಹಾಗೂ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಎಲ್ಲ ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಜನಸಂಪರ್ಕ ಹಾಗೂ ಜಾಗೃತಿ ಸಭೆ ನಡೆಸಲಿದೆ. ಮೀಟರ್ ಬಡ್ಡಿ ವಿಧಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಬಡ್ಡಿ ಮತ್ತು ಲೇವಾದೇವಿ ವ್ಯವಹಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಂಡಿದ್ದು, 61 ಪ್ರಕರಣ ದಾಖಲಿಸಿ, 50 ಮಂದಿಯನ್ನು ಬಂಧಿಸಲಾಗಿದೆ ಎಂದರು.

ಅಂಬರೀಷ್ ಅನಾರೋಗ್ಯ:
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರಿಗೆ ಮುಖ್ಯಮಂತ್ರಿ ಭೇಟಿ ವೇಳೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗಲಿಲ್ಲ. ಕಾರಣ, ಅವರ ಅನಾರೋಗ್ಯ. ಭೇಟಿ ವೇಳೆ ಆರೋಗ್ಯ ಸರಿಯಿಲ್ಲ ಎಂದು ಹೇಳದ ಅವರಿಗೆ ಉಬ್ಬಸ (ವಿಜಿಂಗ್) ಕಾಡುತ್ತಲಿತ್ತು. ಹೊನ್ನಾಯ್ಕನಹಳ್ಳಿ ಗ್ರಾಮದ ಮೃತ ರೈತ ಶಿವಲಿಂಗೇಗೌಡರ ನಿವಾಸಕ್ಕೆ ಸಿಎಂ ಜತೆ ಅಂಬರೀಷ್ ಸಹ ಬಂದಿದ್ದರು. ಅಲ್ಲಿ 15 ನಿಮಿಷ ಕಾಲ ಮಾತುಕತೆಯಲ್ಲಿ ಜತೆಗಿದ್ದ ಅಂಬರೀಷ್ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡುವಾಗ ಬರಲಾಗದೇ ಸೀದಾ ಕಾರಿನ ಬಳಿ ನಡೆದರು. ಬಳಿಕ ಸಿಎಂ ಸಿದ್ದರಾಮಯ್ಯ ಅಲ್ಲಿಂದ ಹೊರಟಾಗ ಅವರ ಜತೆ ಅಂಬರೀಷ್ ಸಹ ಕಾರಿನಲ್ಲಿ ಕುಳಿತು ಪ್ರಯಾಣ ಬೆಳೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT