ಪ್ರಧಾನ ಸುದ್ದಿ

ಉತ್ತರಾಖಂಡ್‌ನಲ್ಲಿ ಮದ್ಯ ಹಗರಣ: ಬಿಜೆಪಿ ಆರೋಪ

Rashmi Kasaragodu

ನವದೆಹಲಿ: ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಖಾಸಗಿ ಕಾರ್ಯದರ್ಶಿ ಮಹಮ್ಮದ್ ಶಾಹಿದ್ ಉತ್ತರಾಖಂಡದಲ್ಲಿರುವ ಮದ್ಯ ನೀತಿಯನ್ನು ಬದಲಿಸಲು ಮಧ್ಯವರ್ತಿಯೊಂದಿಗೆ ಸಂಧಾನ ಮಾಡುತ್ತಿರುವ ದೃಶ್ಯಗಳನ್ನು ಚುಟುಕು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದು, ಆ ವಿಡಿಯೋವನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದೆ.

ಪ್ರಸ್ತುತ ವಿಡಿಯೋ ಬಿಡುಗಡೆ ಮಾಡುವ ಮೂಲಕ ಉತ್ತರಾಖಂಡ್‌ನಲ್ಲಿ ಬಿಜೆಪಿ ಆಡಳಿತಾರೂಡ ಕಾಂಗ್ರೆಸ್ ಸರ್ಕಾರ ವಿರುದ್ಧ ರಣ ಕಹಳೆಯನ್ನೂದಿದೆ.

ಪಕ್ಷದ ಪ್ರಧಾನ ಕಚೇರಿಯಲ್ಲಿ ವೀಡಿಯೋ ಬಿಡುಗಡೆ ಮಾಡಿದ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಉತ್ತರಾಖಂಡದಲ್ಲಿ ವಿಜಯ್ ಬಹುಗುಣ ಅವರು ರೂಪಿಸಿದ್ದ ಮದ್ಯ ನೀತಿಯಲ್ಲಿ ವಿದೇಶೀ ಮದ್ಯವನ್ನು ಘರ್‌ವಾಲ್ ಮಂಡಲ್ ವಿಕಾಸ್ ನಿಗಮ್ ಮತ್ತು ಅಗ್ರಿಕಲ್ಚರ್ ಮಾರ್ಕೆಟಿಂಗ್ ಕೌನ್ಸಿಲ್ ಮೂಲಕ ಸಗಟು ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಆದರೆ ಈಗ ಘರ್‌ವಾಲ್ ಮಂಡಲ್ ವಿಕಾಸ್ ನಿಗಮ್ ಮತ್ತು ಅಗ್ರಿಕಲ್ಚರ್ ಮಾರ್ಕೆಟಿಂಗ್ ಕೌನ್ಸಿಲ್ ಅದೇ ಮದ್ಯವನ್ನು ಇತರ ಮಾರಾಟಗಾರರಿಗೆ ಮತ್ತು ಮೂರನೇ ವ್ಯಕ್ತಿಗಳಿಗೆ ಹಂಚಿಕೆ ಮಾಡುತ್ತಿವೆ.

ಕಾಂಗ್ರೆಸ್ ಸರ್ಕಾರ ಉತ್ತರಾಖಂಡ್‌ನಲ್ಲಿ ನೆರೆ ಬಂದಾಗ ಬಹುಗುಣ ಅವರನ್ನು ಬದಲಿಸಿ ಅವರ ಸ್ಥಾನಕ್ಕೆ ಹರೀಶ್ ರಾವತ್ ಅವರನ್ನು ಕರೆ ತಂದಿತ್ತು. ಆದರೆ ಇಲ್ಲಿ ಮುಖ್ಯಮಂತ್ರಿ ರಾವತ್ ಅವರು ಮಾಡಿದ ಮೊದಲ ಕೆಲಸವೆಂದರೆ ಮದ್ಯ ನೀತಿಯನ್ನು ಬದಲಿಸಿದ್ದು ಎಂದು ಸೀತಾರಾಮನ್ ಹೇಳಿದ್ದಾರೆ.

ಸುಮಾರು ಕೋಟಿ ರುಪಾಯಿಗಳ ವ್ಯವಹಾರದ ಬಗ್ಗೆ ಸಂಧಾನ ಮಾಡಿರುವ ಬಗ್ಗೆ ವೀಡಿಯೋದಲ್ಲಿ ದೃಶ್ಯಗಳಿವೆ. ನೀವೆಷ್ಟು ಕೊಡುತ್ತೀರಿ? ಈಗ ಎಷ್ಟು ಕೊಡಲು ಸಾಧ್ಯ? ಹಣವನ್ನು ದೆಹಲಿ ಅಥವಾ ಡೆಹ್ರಾಡೂನ್‌ನಲ್ಲಿ ಪಾವತಿ ಮಾಡುತ್ತೀರಾ? ಈಗ ಶೇ. 25 ಮತ್ತು ಆಮೇಲೆ ಶೇ. 75 ಕೊಡಿ...ಇಂಥಾ ಮಾತುಗಳೆಲ್ಲಾ ಚುಟುಕು ಕಾರ್ಯಾಚರಣೆ ನಡೆಸಿದಾಗ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಸಚಿವೆ ಹೇಳಿದ್ದಾರೆ.

ಸಹಾಯಕ್ಕಾಗಿ ಗೋಗರೆಯುತ್ತಿರುವ ಉತ್ತರಾಖಂಡ ರಾಜ್ಯದಲ್ಲಿ ಮುಖ್ಯಮಂತ್ರಿ ಮತ್ತು ಅವರ ಅಧಿಕಾರಿಗಳು ದುಡ್ಡು ಮಾಡುವಲ್ಲಿ ತಲ್ಲೀನರಾಗಿದ್ದಾರೆ ಎಂದು ಸೀತಾರಾಮನ್ ಆರೋಪಿಸಿದ್ದಾರೆ.

SCROLL FOR NEXT