ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮ್ಯಾಗಿ ನೂಡಲ್ಸ್ ವಿವಾದ: ರಾಯಭಾರಿಗಳ ವಿರುದ್ಧ ಎಫ್ ಐಆರ್..!

ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರಿಯಾಂಕಾ ಚೋಪ್ರಾ ವಿರುದ್ಧ...

ಮ್ಯಾಗಿ ನೂಡಲ್ಸ್ ಪ್ರಚಾರ ರಾಯಭಾರಿಗಳಾಗ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಪ್ರಿಯಾಂಕ ಛೋಪ್ರಾ
Srinivasa Murthy VN
Updated On : 2 Jun 2015, 2:06 am

ನವದೆಹಲಿ: ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ಮಕ್ಕಳ ಆರೋಗ್ಯ ಹಾಳುಮಾಡಬಲ್ಲ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ಸುಧೀರ್ ಕುಮಾರ್ ಓಜಾ ಎಂಬ ವಕೀಲರೊಬ್ಬರು ಬಿಹಾರದ ಮುಜಾಫರಪುರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಂಸ್ಥೆಯ ಈ ಮೂವರು ರಾಯಭಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಹಾಜಿ ಪೊಲೀಸ್ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದೆ. ಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ಹಾಜಿ ಪೊಲೀಸರು ಎಫ್ ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಪತ್ತೆಯಾದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗಳು ನಡೆಯುತ್ತಿದ್ದು, ಬಿಹಾರ, ಉತ್ತರ ಪ್ರದೇಶದ ಕೆಲ ವಕೀಲರು ವಿವಾದಿತ ಮ್ಯಾಗಿ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದು, ಅಲ್ಲದೆ ಸಂಸ್ಥೆಯ ಪ್ರಚಾರ ರಾಯಭಾರಿಗಳಾಗಿರುವ ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್ ಮತ್ತು ಪ್ರಿಯಾಂಕ ಛೋಪ್ರಾ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಈಗಾಗಲೇ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ಈಮೂವರು ನಟರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದೀಗ ಮುಜಾಫರಪುರ ನಲ್ಲಿಯೂ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ಇನ್ನು ನಿನ್ನೆಯಷ್ಟೇ ವಿವಾದಿತ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಕುರಿತು ಸ್ಪಷ್ಟನೆ ನೀಡಿದ್ದ ನೆಸ್ಲೆ ಸಂಸ್ಥೆ, ತಾವು ಮ್ಯಾಗಿ ನೂಡಲ್ಸ್ ಅನ್ನು ಪರೀಕ್ಷೆಗೆ ಒಳಪಡಿಸಿದ್ದು ಯಾವುದೇ ವಿಷಕಾರಿ ಅಂಶಗಳು ಪತ್ತೆಯಾಗಿಲ್ಲ. ಕಾನೂನಿನ ಅನ್ವಯ ಯಾವ ಕ್ರಮಗಳನ್ನು ಕೈಗೊಳ್ಳಬೇಕೋ ಎಲ್ಲವನ್ನು ನಾವು ಕೈಗೊಂಡಿದ್ದೇವೆ ಎಂದು ನೆಸ್ಲೆ ಸಂಸ್ಥೆಯ ವಕ್ತಾರರು ತಿಳಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement