ನವದೆಹಲಿ: ಉತ್ತರ ಪ್ರದೇಶದ ಲಕ್ನೋದಲ್ಲಿ ಮ್ಯಾಗಿ ನ್ಯೂಡಲ್ಸ್ ನಲ್ಲಿ ಹಾನಿಕಾರಕ ಅಂಶ ಇರುವ ಅಂಶ ಅಲ್ಲಿನ ಆಹಾರ ಭದ್ರತಾ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ಹೀಗಾಗಿ ಕೂಡಲೇ ಮ್ಯಾಗಿ ನೂಡಲ್ಸ್ ನ ಸ್ಯಾಂಪಲ್ ಪ್ಯಾಕೆಟ್ ಗಳನ್ನು ಪರೀಕ್ಷೆಗೊಳಪಡಿಸಿದ್ದ ಅಧಿಕಾರಿಗಳು ಅದರಲ್ಲಿ ವಿಷಕಾರಿ ಅಂಶವಿರುವುದನ್ನು ಪತ್ತೆ ಮಾಡಿದ್ದರು. ಅದರಿಂದ ಆರೋಗ್ಯಕ್ಕೆ ಹಾನಿಯಾಗುವ ಬಗ್ಗೆಯೂ ಉತ್ತರ ಪ್ರದೇಶ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಮ್ಯಾಗಿ ನ್ಯೂಡಲ್ಸ್ ಮಾರಾಟಕ್ಕೆ ನೆರವಾಗುವ ಬಾಲಿವುಡ್ ನಟರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಎಲ್ಲಾ ಬೆಳವಣಿಗೆಯಿಂದ ಗಾಬರಿಯಾಗಿರುವ ಕರ್ನಾಟಕ ರಾಜ್ಯ ಸರ್ಕಾರ ಕೂಡ ಮ್ಯಾಗಿಯನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.ಈಗಾಗಲೇ ಆಹಾರ ಸುರಕ್ಷತಾಧಿಕಾರಿಗಳ ಸಭೆ ನಡೆಸಿರುವ ಆರೋಗ್ಯ ಇಲಾಖೆ ವ್ಯಾಪ್ತಿಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥರು ಎಲ್ಲೆಡೆ ಮ್ಯಾಗಿ ಪ್ಯಾಕೇಟ್‍ಗಳ ಮಾದರಿ ಸಂಗ್ರಹಿಸುವಂತೆ ಸಾರ್ವಜನಿಕ ಆರೋಗ್ಯ ಸಂಸ್ಥೆ ಅಧಿಕಾರಿಗಳು ಸೂಚಿಸಿದ್ದಾರೆ.
ಕಂಪನಿ ಹೇಳೋದೇನು?
ಮ್ಯಾಗಿಯಲ್ಲಿ ಮಿತಿಗಿಂತ ಜಾಸ್ತಿ ಆರೋಗ್ಯಕ್ಕೆ ಹಾನಿಕಾರಕ ಅಂಶಗಳಿವೆ ಎನ್ನುವ ವರದಿಯನ್ನು ನೆಸ್ಲೆ ತಳ್ಳಿಹಾಕಿದೆ. ತನ್ನ ಉತ್ಪನ್ನವನ್ನು ಸ್ವತಂತ್ರವಾಗಿ ಪರೀಕ್ಷೆಗೊಳಪಡಿಸಿದ ಬಳಿಕ ಸಂಸ್ಥೆ ಈ ಸ್ಪಷ್ಟನೆ ನೀಡಿದೆ.
ರಾಯಭಾರಿಗಳ ವಿರುದ್ಧ ಎಫ್ ಐಆರ್
ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ಮಕ್ಕಳ ಆರೋಗ್ಯ ಹಾಳುಮಾಡಬಲ್ಲ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ಸುಧೀರ್ ಕುಮಾರ್ ಓಜಾ ಎಂಬ ವಕೀಲರೊಬ್ಬರು ಬಿಹಾರದ ಮುಜಾಫರಪುರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಸಂಸ್ಥೆಯ ಈ ಮೂವರು ರಾಯಭಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಹಾಜಿ ಪೊಲೀಸ್ ಠಾಣೆಯ ಪೊಲೀಸರಿಗೆ ಸೂಚನೆ ನೀಡಿದೆ. ಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ಹಾಜಿ ಪೊಲೀಸರು ಎಫ್ ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪರೀಕ್ಷೆ ಎಲ್ಲೆಲ್ಲಿ ನಡೆಯುತ್ತದೆ?
ನೆಸ್ಲೆ ಸಂಸ್ಥೆಯ ಮ್ಯಾಗಿ ನ್ಯೂಡಲ್ಸ್ ಉತ್ಪಾದನಾ ಘಟಕಗಳು ದೇಶದ ವಿವಿಧ 8 ಸ್ಥಳಗಳಲ್ಲಿವೆ. ಅದೇ ರೀತಿ ರಾಜ್ಯದಲ್ಲಿ ನಂಜನಗೂಡಿನಲ್ಲಿ ಒಂದು ಘಟಕವಿದ್ದು, ಇದರಿಂದ ರಾಜ್ಯದ ದಕ್ಷಿಣ
ಭಾಗಕ್ಕೆ ಮ್ಯಾಗಿ ನ್ಯೂಡಲ್ಸ್ ಪೂರೈಕೆಯಾಗುತ್ತದೆ. ಇದಲ್ಲದೆ ಉತ್ತರ ಕರ್ನಾಟಕ ಮತ್ತು ರಾಜ್ಯದ ಗಡಿ ಜಿಲ್ಲೆಗಳಿಗೆ ನೆರೆ ರಾಜ್ಯಗಳಿಂದ ಮ್ಯಾಗಿ ಬರುತ್ತದೆ. ಆದ್ದರಿಂದ ಪ್ರಮುಖವಾಗಿ ನಂಜನಗೂಡಿನ ಘಟಕದಿಂದ ಪೂರೈಕೆಯಾಗುವ ಪ್ರದೇಶಗಳಲ್ಲಿ ಹೆಚ್ಚಿನ ಮ್ಯಾಗಿ ನ್ಯೂಡಲ್ಸ್‍ಗಳನ್ನು ಸಂಗ್ರಹಿಸಲಾಗುತಿದ್ದು, ಇತರ ಜಿಲ್ಲೆಗಳಲ್ಲೂ ರ್ಯಾಂಡಮ್ ಮಾದರಿಯಲ್ಲಿ ಪ್ಯಾಕೆಟ್‍ಗಳನ್ನು ಸಂಗ್ರಹಿಸಲಾಗುತ್ತಿದೆ. ಈಗಾಗಲೇ 150ಕ್ಕೂ ಹೆಚ್ಚಿನ ಪ್ರದೇಶಗಳಿಂದ ಮಾದರಿ ಸಂಗ್ರಹಿಸಲಾಗಿದ್ದು, ಇವುಗಳನ್ನು ವಿಭಾಗೀಯ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ.
ಅಂದರೆ ರಾಜ್ಯದ ಎಲ್ಲಾ ನಾಲ್ಕು ವಿಭಾಗಗಳಲ್ಲೂ ಪ್ರಮುಖ ಪ್ರಯೋಗಾಲಯಗಳಿದ್ದು, ಅಲ್ಲಲ್ಲೇ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲಾಗುತ್ತಿದೆ. ಇದರೊಂದಿಗೆ ಈಗಾಗಲೇ ಸಂಗ್ರಹಿಸಿರುವ ಮಾದರಿಗಳನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನ್ಯತೆ ಪಡೆದಿರುವ ಪ್ರಯೋಗಾಲಯ(ಎನ್‍ಎಬಿಎಲ್)ದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಲ್ಲದೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್ ಟಿಆರ್‍ಐ)ನಲ್ಲಿಯೂ ಮ್ಯಾಗಿ ಮಾದರಿಗಳನ್ನು ಪರೀಕ್ಷೆ ನಡೆಸಲಾಗುತ್ತಿದೆ.
ಮ್ಯಾಗಿಯಲ್ಲಿ ಹಾನಿಕಾರಕ ಅಂಶ ಯಾವುದು ?
ಮ್ಯಾಗಿ ನ್ಯೂಡಲ್ಸ್ ನಲ್ಲಿ ರುಚಿ ಮತ್ತು ದೀರ್ಘಕಾಲ ಸಂಗ್ರಹಿಸಿಡಲು ನೆರವಾಗುವಂತೆ ಮಾನೋ ಸೋಡಿಯಂ ಗ್ಲುಕೋಮ್ಯಾಟ್ ಮಿಶ್ರ ಮಾಡಲಾಗುತ್ತದೆ. ಆದರೆ, ಇದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದರೆ ಆರೋಗ್ಯಕ್ಕೆ ಹಾನಿಕಾರಕ. ಇದಲ್ಲದೆ ಹಾನಿಕಾರ ಸೀಸದ ಪ್ರಮಾಣ ಕೂಡ ಮ್ಯಾಗಿಯಲ್ಲಿ ಭಾರಿ ಪ್ರಮಾಣದಲ್ಲಿರುವುದು ಪತ್ತೆಯಾಗಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಎಲ್ಲೆಡೆ ಮ್ಯಾಗಿ ನ್ಯೂಡಲ್ಸ್ ಬಗ್ಗೆ ಆತಂಕದ ಮಾತುಗಳು ಕೇಳಿ ಬರುತ್ತಿರುವುದರಿಂದ ರಾಜ್ಯಾದ್ಯಂತ ಇದರ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಅದರಲ್ಲಿ ವಿಷಕಾರಿ ಅಂಶ ಇದೆ ಎಂದು ತಿಳಿದರೆ ನೆಸ್ಲೆ ಸಂಸ್ಥೆ ವಿರುದ್ಧ ಕೇಸು ದಾಖಲಿಸುವುದು ಖಚಿತ. ನಂತರ ಅದನ್ನು ರಾಜ್ಯದಲ್ಲಿ ನಿಷೇಧಿಸುವ ಬಗ್ಗೆ ಸರ್ಕಾರ ತೀರ್ಮಾನಿಸುತ್ತದೆ.
- ಡಾ. ಎಚ್.ಎಸ್.ಶಿವಕುಮಾರ್,
ಸಾರ್ವಜನಿಕ ಆರೋಗ್ಯ ಸಂಸ್ಥೆ ಜಂಟಿ ನಿರ್ದೇಶಕ