ನವದೆಹಲಿ: ಕಾನೂನು ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿರುವ ಜಿತೇಂದ್ರ ಸಿಂಗ್ ತೋಮರ್ ಅವರು ತಮ್ಮ ಪದವಿ ನಕಲಲ್ಲ ಎಂದು ಮತ್ತೆ ತಿಳಿಸಿದ್ದು, ತಮ್ಮ ಬಂಧನ ಕೇಂದ್ರ ಸರ್ಕಾರ ನಡೆಸಿರುವ ಪಿತೂರಿ ಎಂದಿದ್ದಾರೆ.
"ನನ್ನ ಪದವಿ ಸಾಚಾ. ಇದೆಲ್ಲ ಕೇಂದ್ರದ ಪಿತೂರಿ" ಎಂದು ತೋಮರ್ ಅವರನ್ನು ಫೈಜಾಬಾದ್ ಗೆ ಕೊಂಡೊಯ್ಯುವ ವೇಳೆಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ನೆನ್ನೆ ತೋಮರ್ ಅವರನ್ನು ಬಂಧಿಸಿ ನಾಲ್ಕು ದಿನಗಳ ಪೊಲೀಸ್ ಬಂಧನಕ್ಕೆ ವಶಪಡಿಸಲಾಗಿತ್ತು. ಇವರ ಬಂಧನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಭಾರಿ ಹಿನ್ನಡೆ ಎನ್ನಲಾಗಿದೆ.
ಕಳೆದ ತಿಂಗಳು ದೆಹಲಿಯ ವಕೀಲರ ಸಂಘ ತೋಮರ್ ಅವರ ಪದವಿ ಪ್ರಮಾಣ ಪತ್ರ ನಕಲು ಎಂದು ಆರೋಪಿಸಿ ಪೊಲೀಸ್ ತನಿಖೆಗೆ ಆಗ್ರಹಿಸಿತ್ತು.
ತೋಮರ್ ತಾವು ಪದವಿ ಪಡೆದಿದ್ದೇನೆ ಎಂದು ಹೇಳಿಕೊಂಡಿರುವ ಪೂರ್ವ ಬಿಹಾರದ ಟೀಕಾ ಮಾಂಝಿ ಭಾಗ್ಲಾಪುರ ವಿಶ್ವವಿದ್ಯಾಲಯ, ಪದವಿ ನಕಲು ಎಂದು ದೆಹಲಿ ಹೈಕೋರ್ಟ್ ಗೆ ತಿಳಿಸಿದ್ದ ಹಿನ್ನಲೆಯಲ್ಲಿ ಪೊಲೀಸರು ತನಿಖೆಗೆ ಆದೇಶಿಸಲಾಗಿತ್ತು.