ನವದೆಹಲಿ: ರಂಜಾನ್ ಪವಿತ್ರ ತಿಂಗಳು ಇನ್ನೇನು ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನೆರೆಹೊರೆಯ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾದ ಪಾಕಿಸ್ತಾನ, ಆಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶಗಳಿಗೆ ಮುಂಚಿತವಾಗಿಯೇ ಹಬ್ಬದ ಶುಭ ಕೋರಿದ್ದಾರೆ.
ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್, ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ ಮತ್ತು ಆಪ್ಘಾನಿಸ್ತಾನದ ಅಧ್ಯಕ್ಷ ಅಶರಫ್ ಘನಿ ಅವರುಗಳಿಗೆ ದೂರವಾಣಿ ಕರೆ ಮಾಡಿ ಅವರಿಗೂ ಮತ್ತು ಅವರ ದೇಶದ ಜನರಿಗೂ ರಂಜಾನ್ ಪವಿತ್ರ ತಿಂಗಳಿಗೆ ಶುಭ ಕೋರಿದ್ದಾರೆ. ಪ್ರಾರ್ಥನೆ ಮತ್ತು ದೈವಭಕ್ತಿಯ ಈ ತಿಂಗಳಲ್ಲಿ ಶಾಂತಿ, ಸೌಹಾರ್ದ ಮತ್ತು ನೆಮ್ಮದಿ ನೆಲೆಸಲಿ ಎಂದು ಹಾರೈಸಿದ್ದಾರೆ.
ಈ ಪವಿತ್ರ ರಂಜಾನ್ ಸಮಯದಲ್ಲಿ ಭಾರತದಲ್ಲಿ ಸೆರೆಯಲ್ಲಿರುವ ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ನವಾಜ್ ಶರೀಫ್ ಅವರಿಗೆ ಮೋದಿ ತಿಳಿಸಿದ್ದಾರೆ. ಶಾಂತಿ, ಗೆಳೆತನ ಮತ್ತು ಎರಡು ದೇಶಗಳ ನಡುವೆ ಸಹಕಾರ ಇರಬೇಕೆಂದು ನವಾಜ್ ಶರೀಫ್ ಅವರಿಗೆ ಮೋದಿ ತಿಳಿಸಿದ್ದಾರೆ.
ಮೋದಿಯವರ ಢಾಕಾ ಪ್ರವಾಸ ಮತ್ತು ಮಯನ್ಮಾರ್ ಗಡಿಯಲ್ಲಿ ಭಾರತ ನಡೆಸಿದ ದಾಳಿಯ ವೇಳೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಪರಸ್ಪರ ವಾಗ್ದಾಳಿ ನಡೆಸಿದ್ದವು. ಆದುದರಿಂದ ಈ ರಾಜತಾಂತ್ರಿಕ ಮಾತುಕತೆ ಮಹತ್ವ ಎನ್ನಲಾಗಿದೆ.