ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬೆಳಗ್ಗೆ ಅಧಿಕೃತವಾಗಿ ಚಾಲನೆ ಮಾಡಿದರು.
ದೆಹಲಿಯ ರಾಜಪಥದಲ್ಲಿ ವಿಶೇಷವಾಗಿ ನಿರ್ಮಿಸಿರುವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಿದರು. ದೆಹಲಿಯ ರಾಜಪಥದ ಬಳಿಯ ಬೂಟ್ ಹೌಸ್ ಬಳಿ ನಿರ್ಮಾಣವಾಗಿರುವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕೇಂದ್ರ ಸಚಿವರು, ಸಂಸದರು, ಹಿರಿಯ ಅಧಿಕಾರಿಗಳು ಮತ್ತು ದೆಹಲಿ ಸಚಿವರು ಸೇರಿದಂತೆ ಸುಮಾರು 37 ಸಾವಿರ ಮಂದಿ ಏಕಕಾಲದಲ್ಲಿ ಯೋಗ ಮಾಡುವ ಮೂಲಕ ದಾಖಲೆ ಯೋಗ ದಿನ ಆಚರಣೆ ಮಾಡಿದರು.
ರಾಜ್‍ಪಥ್ ನಲ್ಲಿ ಜನಸಾಮಾನ್ಯರ ನಡುವೆ ಪ್ರಧಾನಿ ಮೋದಿ ಯೋಗ ಮಾಡಿದರು.ಇನ್ನು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಬೇಕು ಎಂದು ವಿಶ್ವಸಂಸ್ಥೆ ಕಳೆದ ಡಿಸೆಂಬರ್ ನಲ್ಲಿ ಘೋಷಣೆ ಮಾಡಿತ್ತು. ಇದರ ಅನ್ವಯ ಭಾರತದಲ್ಲಿ ಸಾಕಷ್ಟು ತಿಂಗಳ ಹಿಂದೆಯೇ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು. ಕೇಂದ್ರದ ಆಯುಷ್ ಇಲಾಖೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದು, ಯೋಗ ದಿನಾಚರಣೆಯ ಪ್ರಚಾರಕ್ಕೆಂದೇ ಸುಮಾರು 10 ಕೋಟಿ ರು.ಗಳನ್ನು ವ್ಯಯಿಸಿದೆ.
ಇನ್ನು ದೆಹಲಿಯ ಮೊರಾರ್ಜಿ ದೇಸಾಯಿ ಯೋಗ ಕೇಂದ್ರದ ಸದಸ್ಯರು ದೆಹಲಿಯ ರಾಜಪಥದಲ್ಲಿ ಅಳವಡಿಸಲಾಗಿರುವ ಬೃಹತ್ ಎಲ್ ಇಡಿ ಪರದೆ ಅಳವಡಿಸಿದ್ದು, ಯೋಗ ಕುರಿತು ಸಿಡಿಗಳನ್ನು ತೋರಿಸುವ ಮೂಲಕ ನೆರೆದಿರುವ ಸಾವಿರಾರು ಮಂದಿಗೆ ಯೋಗದ ಮಾಹಿತಿ ನೀಡಿದರು.