ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡುವ ಮೂಲಕ ಮನುಕುಲದ ಶಾಂತಿ-ಸಹಬಾಳ್ವೆಯ ಹೊಸ ಯುಗಕ್ಕೆ ನಾವು ನಾಂದಿ ಹಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಧಾನಿ ದೆಹಲಿಯ ರಾಜಪಥದಲ್ಲಿ ಕೇಂದ್ರ ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ರಾಜಪಥ ಯೋಗಪಥವಾಗಲಿದೆ ಎಂದು ಭಾವಿಸಿರಲಿಲ್ಲ. ಶಾಂತಿ-ಸಂತೋಷಕ್ಕಾಗಿ ಎಲ್ಲರೂ ಯೋಗವನ್ನು ಆನುಸರಿಸಬೇಕು. ಇಂದು ಅಂತಾರಾಷ್ಟ್ರೀಯ ಯೋಗ ದಿನದ ಆರಂಭವಾಗುತ್ತಿದೆ. ವಿಶ್ವ ಯೋಗ ದಿನದಿಂದ ಕೇವಲ ಒಂದು ದಿನದ ಆರಂಭವಾಗುತ್ತಿಲ್ಲ. ಬದಲಿಗೆ ಮನುಕುಲದ ಶಾಂತಿ, ಸಹಬಾಳ್ವೆಗೆ ಈ ದಿನ ನಾವು ನಾಂದಿ ಹಾಡುತ್ತಿದ್ದೇವೆ. ಶಾಂತಿ ಸುವ್ಯವಸ್ಥೆ ಕಾಪಾಡು ನಿಟ್ಟಿನಲ್ಲಿ ಯೋಗದ ಮೂಲಕ ತರಬೇತಿ ನೀಡಲಾಗುತ್ತಿದೆ. ಯೋಗ ಯುಗಯುಗಗಳಿಂದ ನಡೆದು ಬರುತ್ತಿದೆ. ನಮ್ಮ ಗುರು ಹಿರಿಯರು, ಗುರುಗಳು, ಮುನಿಗಳು, ಋುಷಿಗಳು ಈ ನಮ್ಮ ಯೋಗ ಪರಂಪರೆಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
"ಜನರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವರ್ಧಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದೆ. ಇಡೀ ವಿಶ್ವವನ್ನು ಸಂಘರ್ಷ, ಉದ್ವಿಗ್ನತೆ ಮುಕ್ತಗೊಳಿಸುವುದರ ಜತೆಗೆ ಸದ್ಭಾವನೆಯ ಸಂದೇಶ ಸಾರುವುದು ಕಾರ್ಯಕ್ರಮದ ಗುರಿಯಾಗಿದೆ.
ಇಂದು ವಿಶ್ವದಲ್ಲಿ ಹಲವು ಕ್ರಾಂತಿಗಳಾಗುತ್ತಿವೆ. ತಂತ್ರಜ್ಞಾನ ಮನುಷ್ಯನ ಭಾಗವಾಗಿ ಹೋಗಿದೆ. ಆದರೆ ಇವುಗಳಿಂದ ಮನುಷ್ಯ ಎಲ್ಲಿದ್ದಾನೆಯೋ ಅಲ್ಲಿಯೇ ಇರುವಂತೆ ಆಗಬಾರದು. ಹಲವು ಕಾರಣಗಳಿಂದ ಮತ್ತು ನಮ್ಮ ಅಜ್ಞಾನದಿಂದ ನಮ್ಮಲ್ಲಿ ವಿಕೃತಿ ಮೂಡುತ್ತಿದೆ. ಈ ಮಿಸ್ ಮ್ಯಾಚ್ ಕೂಡ ಮಾನವ ಜಾತಿಗೆ ದೊಡ್ಡ ಹಾನಿಯನ್ನುಂಟು ಮಾಡಬಹುದು. ಆದ್ದರಿಂದ ಮಾನವನ ಆಂತರಿಕ ವಿಕಾಸ ಕೂಡ ಆಗಬೇಕು. ವಿಶ್ವದ ಹತ್ತಿರ ಇಂದು ಯೋಗವಿದೆ. ಈ ಯೋಗಕ್ಕೆ ಪ್ರಪಂಚದ ವಿವಿಧ ಸಮುದಾಯ ತನ್ನದೇ ಆದ ಯೋಗದಾನ ನೀಡಿವೆ. ಅವರೆಲ್ಲರ ಯೋಗದಾನ ಸ್ವೀಕರಿಸಿ, ಆಂತರಿಕ ಮನಸ್ಸನ್ನು ಹೇಗೆ ವಿಕಸನಗೊಳಿಸುವುದು? ಮನುಷ್ಯ ಉದ್ವೇಗರಹಿತ ಜೀವನ ಪಡೆದು, ಶಾಂತಿ ಮಾರ್ಗದಲ್ಲಿ ಮುನ್ನಡೆಯಲು ಜೀವನವನ್ನು ಪ್ರಶಸ್ತಗೊಳಿಸುವುದೇ ಹೇಗೆ..? ಯೋಗ ಅಂದರೆ ದೈಹಿಕ ಕಸರತ್ತು ಎಂಬುದು ಜನರ ಸಾಮಾನ್ಯ ಭಾವನೆಯಾಗಿದೆ. ದೇಹಕ್ಕೆ ಮಾತ್ರ ಗಮನ ನೀಡುವುದು ಯೋಗವಲ್ಲ. ವಾಸ್ತವವಾಗಿ ಯೋಗ ವ್ಯಾಯಾಮ ಒಂದೇ ಅಲ್ಲ, ದೈಹಿಕ ಮತ್ತು ಮಾನಸಿಕ ಪುನಶ್ಚೇತನದ ಸಾಧನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದೇ ವೇಳೆ ಯೋಗ ದಿನಾಚರಣೆಗೆ ವ್ಯಕ್ತವಾದ ವಿರೋಧದ ಕುರಿತಂತೆ ಮಾರ್ಮಿಕವಾಗಿ ಹೇಳಿದ ಪ್ರಧಾನಿ ಮೋದಿ, ರಾಜಪಥ ಯೋಗಪಥವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ತುಂಬಾ ಜನರು ಭಾವಿಸಿರಲಿಲ್ಲ. ಆದರೆ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲರೂ ಸೇರುವ ಮೂಲಕ ರಾಜಪಥವನ್ನು ಯೋಗಪಥವನ್ನಾಗಿ ಮಾರ್ಪಡಿದ್ದೀರಾ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು. ಯುಗಯುಗದಿಂದಲೂ ಯೋಗ ನಡೆಯುತ್ತಾ ಬಂದಿದ್ದು, ಕಾಲ ಕ್ರಮೇಣ ಹಲವು ಸಂಗತಿಗಳು ಅದರಲ್ಲಿ ಸೇರಿವೆ. ಯೋಗ ಪಟುಗಳು ನಮ್ಮ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅಂತಹ ಮಹಾನುಭಾವರಿಗೆ ನಾನು ನಮಿಸುತ್ತೇನೆ. ಅವರಿಗೆ ನನ್ನ ಗೌರವ ವ್ಯಕ್ತಪಡಿಸುತ್ತೇನೆ. ಈ ಶಾಸ್ತ್ರ ಯಾವ ಭೂಭಾಗದಲ್ಲಿ ಯೋಗ ಹುಟ್ಟಿತು? ಯಾವ ಭೂಭಾಗಕ್ಕೆ ಪಸರಿತು? ಅದು ನಮಗೆ ಮುಖ್ಯವಲ್ಲ.
ಆದ್ದರಿಂದಲೇ ಇಂದು ಸೂರ್ಯನ ಪ್ರಥಮ ಕಿರಿಣ ಬಿದ್ದ ಸ್ಥಳದಿಂದ ಸೂರ್ಯಾಸ್ತದ ಕೊನೆ ಕಿರಣದ ಸ್ಥಳದವರೆಗೂ ಯೋಗ ನಡೆಸಲಾಗುತ್ತಿದೆ. ಇಂದು ಸೂರ್ಯನ ಎಲ್ಲ ಕಿರಣಗಳೂ ಈ ಯೋಗಾಭ್ಯಾಸಿಗಳಿಗೆ ಆಶೀರ್ವಾದ ನೀಡಲಿವೆ. ಈ ವೇದಿಕೆಯಿಂದ ನಾನು 193 ದೇಶಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯೋಗಕ್ಕೆ ಸಹ ಪ್ರಾಯೋಜಕತ್ವ ವಹಿಸಿದ 177 ದೇಶಗಳಿಗೆ ಆಭಾರಿಯಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.