ಪ್ರಧಾನ ಸುದ್ದಿ

ಅಕ್ರಮ ಕಲ್ಲು ಗಣಿಗಾರಿಕೆ: ಡಿಕೆಶಿ ಸೇರಿ 64 ಮಂದಿಗೆ 'ಹೈ' ನೋಟಿಸ್

Lingaraj Badiger

ಬೆಂಗಳೂರು: ಅಕ್ರಮ ಕಲ್ಲುಗಣಿಗಾರಿಕೆ ಮಾಡಿದ್ದಾರೆಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ 64 ಪ್ರತಿವಾದಿಗಳಿಗೆ ಹೈಕೋರ್ಟ್ ತುರ್ತು ನೋಟಿಸ್ ನೀಡಿದೆ.

ರಾಮನಗರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ಬಿ.ಸಿ.ನಾರಾಯಣಸ್ವಾಮಿ ಮತ್ತು ಎ.ಸಿ.ಶಿವರಾಜು ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಕ್ಯ.ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ 64 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.

ರಾಮನಗರ ಸುತ್ತಮುತ್ತ ಅರಣ್ಯ ಪ್ರದೇಶದಲ್ಲಿ ಡಿಕೆಶಿ ಹಾಗೂ ಅವರ ಕುಟುಂಬ ಸದಸ್ಯರು ಅಕ್ರಮ ಕಲ್ಲು ಗಣಿಗಾರಿಕೆ ಮಾಡಿದ್ದಾರೆಂದು 2006ರಲ್ಲಿ ಅಂದಿನ ಅರಣ್ಯ ಸಂರಕ್ಷಣಾಧಿಕಾರಿ ಯು.ವಿ.ಸಿಂಗ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ತನಿಖೆಯಲ್ಲಿ ಡಿಕೆಶಿ ಮತ್ತು ಕುಟುಂಬಸ್ಥರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವುದು ಸಾಬೀತಾಗಿತ್ತು. ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದ್ದು ಮಾತ್ರವಲ್ಲದೇ ಅರಮ್ಯ ಒತ್ತುವರಿ ಮಾಡುವ ಮೂಲಕ ಅರಣ್ಯ ಸಂಪತ್ತನ್ನು ಸಹ ನಾಶ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ತನಿಖಾ ವರದಿ ಆಧಾರದ ಮೇಲೆ ಸರ್ಕಾರ ಈವರೆಗೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ವಿಚಾರಣೆ ನಡೆಸಿದ ವಿಭಾಗೀಯ ಪೀಠ ಪ್ರತಿವಾದಿಗಳೆಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ಮುಂದೂಡಿದೆ.

SCROLL FOR NEXT