ಪ್ರಧಾನ ಸುದ್ದಿ

ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿ ಅರ್ಜಿ ವಜಾ

Guruprasad Narayana

ಮುಂಬೈ: ಮಹಾತ್ಮಾಗಾಂಧಿ ಹತ್ಯೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ದೂಷಿಸಿದ್ದ ಪ್ರಕರಣದಲ್ಲಿ ಮಾನನಷ್ಟ ಮೊಕದ್ದಮೆ ಎದುರುಸುತ್ತಿರುವ ರಾಹುಲ್ ಗಾಂಧಿ ಅವರು ಈ ಪ್ರಕರಣವನ್ನು ರದ್ದು ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾ ಮಾಡಿದೆ. ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಭಾರಿ ಹಿನ್ನಡೆ ಎನ್ನಲಾಗಿದೆ.

ಆರ್ ಎಸ್ ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಥಾಣೆ ಜಿಲ್ಲೆಯ ಭಿವಾಂಡಿ ಮೆಜೆಸ್ಟ್ರೆಟ್ ಕೋರ್ಟ್ ನಲ್ಲಿ ಹಾಕಿರುವ ಮಾನನಷ್ಟ ಮೊಕದ್ದಮೆಯನ್ನು ವಜಾ ಮಾಡಲು ರಾಹುಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಎಂ ಎಲ್ ತಹಲಿಯಾನಿ ತಿರಸ್ಕರಿಸಿದ್ದಾರೆ.

ತಾವು ಸಲ್ಲಿಸಿರುವ ದೂರಿನಲ್ಲಿ ಕುಂಟೆ ಅವರು, ರಾಹುಲ್ ಗಾಂಧಿ ಮಾರ್ಚ್ ೬ ರಂದು ಸೋನಾಲೆಯಲ್ಲಿ ನಡೆದ ಲೋಕಸಭಾ ರ್ಯಾಲಿಯಲ್ಲಿ "ಆರ್ ಎಸ್ ಎಸ್ ಜನರು ಗಾಂಧಿಯನ್ನು ಕೊಂದದ್ದು" ಎಂದು ಹೇಳಿದ್ದಾರೆ. ಈ ಭಾಷಣದ ಮೂಲಕ ಆರ್ ಎಸ್ ಎಸ್ ನ ಪ್ರಖ್ಯಾತಿಗೆ ಮಸಿ ಬಳೆಯುವುದು ಅವರ ಉದ್ದೇಶ ಎಂದು ದೂರಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಮೆಜೆಸ್ಟ್ರೆಟ್ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ ಅವರು ಕೋರ್ಟಿಗೆ ಬರಲು ವಿನಾಯಿತಿ ಕೋರಿ ಹಾಗು ಪ್ರಕರಣವನ್ನು ವಜಾ ಮಾಡುವಂತೆ ಕೋರಿತ್ತು.

SCROLL FOR NEXT