ನವದೆಹಲಿ: ಈ ವರ್ಷದ ಮೊದಲೆರಡು ತಿಂಗಳುಗಳಲ್ಲಿ ೨೯೦ ಕ್ಕೂ ಹೆಚ್ಚು ರೇಪ್ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ ಎಂದು ಬುಧವಾರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ರಾಜ್ಯದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಹಿಳೆಯರ ವಿರುದ್ದ ಅಪರಾಧಗಳನ್ನು ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವಾಲಯದ ರಾಜ್ಯ ಸಚಿವ ಹರಿಭಾಯಿ ಪರತಿಭಾಯಿ ಚೌಧರಿ, ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ೨೯೧ ರೇಪ್ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ ಎಂದು ತಿಳಿಸಿದ್ದಾರೆ.
ಮಹಿಳೆಯರ ಗಾಂಭೀರ್ಯವನ್ನು ಹಾಳುಗೆಡುವ ೬೬೨ ಪ್ರಕರಣಗಳು ಮತ್ತು ಗಾಂಭೀರ್ಯವನ್ನು ಅವಮಾನಿಸುವ ೨೧೨ ಪ್ರಕರಣಗಳು ಇದೇ ಸಮಯದಲ್ಲಿ ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷ ಫೆಬ್ರವರಿಯವರೆಗೆ, ಅತ್ತೆ ಮಾವ ಮತ್ತು ಪತಿಯರ ಕಿರುಕುಳದ ೨೮,೪೩೮ ಕೇಸುಗಳು ಮತ್ತು ವರದಕ್ಷಿಣೆಯಿಂದ ಸಾವಾದ ೧೯ ಪ್ರಕರಣಗಳು ದಾಖಲಾಗಿವೆ.
೨೦೧೪ ರಲ್ಲಿ ೨೧೬೬, ೨೦೧೩ ರಲ್ಲಿ ೧೬೩೬ ರೇಪ್ ಕೇಸುಗಳು ದೆಹಲಿಯಲ್ಲಿ ದಾಖಲಾಗಿದ್ದವು. ೨೦೧೨ ರಲ್ಲಿ ಈ ಸಂಖ್ಯೆ ಕೇವಲ ೭೦೬ ಮಾತ್ರ ಇತ್ತು.
೩೩೩ ಕೋಟಿ ರುಪಾಯಿ ವ್ಯಯಿಸಿ ದೆಹಲಿಯ ಹಲವು ಪ್ರದೇಶಗಳಲ್ಲಿ ೫೨೦೦ ಸಿಸಿಟಿವಿ ಗಳನ್ನು ಅಳವಡಿಸಲಾಗುತ್ತಿದೆ, ಇದು ಅಪರಾಧಗಳನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ ಎಂದಿದ್ದಾರೆ ಚೌಧರಿ.