ಪ್ರಧಾನ ಸುದ್ದಿ

ಪಕ್ಷ ವಿರೋಧಿ ಚಟುವಟಿಕೆಗಳನ್ನು ತಳ್ಳಿಹಾಕಿದ ಯಾದವ್, ಭೂಷಣ್ ಜಂಟಿ ಹೇಳಿಕೆ

Guruprasad Narayana

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಇಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಜಂಟಿ ಹೇಳಿಕೆ ನೀಡಿರುವುದಲ್ಲದೆ, ತಮ್ಮ ಮೇಲೆ ಆರೋಪಿಸಿದ್ದ ಎಲ್ಲ ಪಕ್ಷ ವಿರೋಧಿ ಚಟುವಟಿಕೆಗಳನ್ನು ತಳ್ಳಿಹಾಕಿದ್ದಾರೆ ಮತ್ತು ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ.

ಕಾರ್ಯಕರ್ತರಿಗೆ ಜಂಟಿಯಾಗಿ ಬರೆದ ಬಹಿರಂಗ ಪತ್ರದಲ್ಲಿ, ತಾವು ಪಕ್ಷದ ಏಳಿಗೆಗಾಗಿ ದುಡಿಯಲು ಸಿದ್ಧ ಎಂದಿರುವುದಲ್ಲದೆ ಪಕ್ಷ ಯಾವುದೇ ಒಬ್ಬ ವ್ಯಕ್ತಿಗಿಂದ ದೊಡ್ಡದು ಎಂದಿದ್ದಾರೆ.

ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಸೇರಿದಂತೆ ಆಪ್ ನಾಯಕರಾದ ಸಂಜಯ್ ಸಿಂಗ್, ಗೋಪಾಲ್ ರಾಯ್ ಮಾಡಿದ್ದ ಆರೋಪಗಳಿಗೆ ಈ ಪತ್ರದಲ್ಲಿ ಉತ್ತರ ನೀಡಿದ್ದಾರೆ.

ತಮ್ಮ ಮತ್ತು ಕೇಜ್ರಿವಾಲ್ ನಡುವೆ ಬಿರುಕು ಉಂಟಾಗಿದ್ದು ಯಾವಾಗ ಎಂದು ವಿವರಿಸಿರುವ ಪತ್ರ, ಕೇಜ್ರಿವಾಲ್ ಅವರು ಕಾಂಗ್ರೆಸ್ ಪಕ್ಷದ ಬೆಂಬಲ ತೆಗೆದುಕೊಂಡು ಸರ್ಕಾರ ಸ್ಥಾಪಿಸಿದರೋ ಆಗ ನಾವು ವಿರೋಧಿಸಿದ್ದೆವು ಎಂದಿದ್ದಾರೆ.

"ಕೇಜ್ರಿವಾಲ್ ಅವರು ಸರ್ಕಾರ ರಚಿಸಲೇಬೇಕು ಎಂದು ಹಠ ಹಿಡಿದಿದ್ದರು. ನಾವು ಇದನ್ನು ವಿರೋಧಿಸಿದ್ದೆವು ಏಕೆಂದರೆ ಇದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನಿಸುತ್ತಿತ್ತು. ಅಲ್ಲದೆ ಕಾಂಗ್ರೆಸ್ ಪಕ್ಷವನ್ನು ದೆಹಲಿ ಮತದಾರರು ತಿರಸ್ಕರಿಸಿದ್ದರು. ಹೀಗಿದ್ದು ಕೇಜ್ರಿವಾಲ್ ಅವರು ಸರ್ಕಾರ ರಚನೆ ಮಾಡಲು ಮುಂದಾದರು" ಎಂದಿದ್ದಾರೆ.

"ಅರವಿಂದ್ ಕೇಜ್ರಿವಾಲ್ ಅವರು ದೆಹಲಿಗೆ ಹಿಂದಿರುಗಿ ವಿವಾದಗಳನ್ನು ಬಗೆಹರಿಸಿ ಪಕ್ಷದ ಏಕತೆಗೆ ಗಮನ ಹರಿಸಲಿದ್ದಾರೆ ಎಂಬ ಭರವಸೆ ಇದೆ. ಪಕ್ಷದ ಒಳಿತಿಗಾಗಿ ಕೆಲಸವನ್ನು ಮುಂದುವರೆಸುತ್ತೇವೆ" ಎಂದು ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT