ಪ್ರಧಾನ ಸುದ್ದಿ

ಮಾಳವಿಯಾಗೆ ಭಾರತ ರತ್ನ, ಸಿದ್ದಗಂಗಾಶ್ರೀ, ಅಮಿತಾಭ್ ಬಚ್ಚನ್ ಗೆ ಪದ್ಮವಿಭೂಷಣ ಪ್ರದಾನ

Lingaraj Badiger

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಮದನ್ ಮೋಹನ್ ಮಾಳವಿಯಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ಸೋಮವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಿದರು.

ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅವರು ಖ್ಯಾತ ಶಿಕ್ಷಣ ತಜ್ಞ ಮಾಳವಿಯ ಅವರಿಗೆ ಭಾರತ ರತ್ನ(ಮರಣೋತ್ತರ) ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಹಾಜರಿದ್ದ ಮಾಳವಿಯ ಅವರ ಕುಟುಂಬದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು.

ಕಳೆದ ಡಿ.24ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೆಯಿ ಹಾಗೂ ಪಂಡಿತ ಮದನ್ ಮೋಹನ್ ಮಾಳವಿಯ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಪ್ರಕಟಿಸಿತ್ತು.

ಇದೇ ವೇಳೆ ಪ್ರಣಬ್ ಮುಖರ್ಜಿ ಅವರು 9 ಗಣ್ಯರಿಗೆ ಪದ್ಮವಿಭೂಷಣ, 20 ಗಣ್ಯರಿಗೆ ಪದ್ಮಭೂಷಣ ಹಾಗೂ 75 ಗಣ್ಯರಿಗೆ ಪದ್ಮಶ್ರಿ ಪ್ರಶಸ್ತಿ ನೀಡಿ ಗೌರವಿಸಿದರು.

ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಸಿದ್ದಗಂಗಾ ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಮತ್ತು ಕಲಾ ಕ್ಷೇತ್ರದಲ್ಲಿನ ಸೇವೆಗಾಗಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಇನ್ನು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸೇವೆಗಾಗಿ ಡಾ.ಖರನ್ ವಾಲಿಯಾ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು.

ಟಿವಿ ಮೋಹನ್ ದಾಸ್ ಪೈ ಅವರಿಗೆ ಪದ್ಮಶ್ರೀ ಸೇರಿದಂತೆ ಈ ಬಾರಿ ರಾಜ್ಯದ ಏಳು ಗಣ್ಯರಿಗೆ ಪದ್ಮ ಪ್ರಶಸ್ತಿಯ ಗೌರವ ದೊರೆತಿದೆ.

SCROLL FOR NEXT