ಮುಂಬೈ: ಭಾರತ ಮತ್ತು ಪಾಕಿಸ್ತಾನದ ನಡುವೆ ಹದಗೆಟ್ಟ ಸಂಬಂಧದ ಕುರಿತು ವಿಷಾದ ವ್ಯಕ್ತಪಡಿಸಿರುವ ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಷಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿರುವ ಶಿವಸೇನೆ ಪಕ್ಕದ ರಾಷ್ಟ್ರ ನಡೆಸುತ್ತಿರುವ ಭಯೋತ್ಪಾದಾದನಾ ಚಟುವಟಿಕೆಗಳಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಂದ ಉತ್ತರ ಕೇಳುವಂತೆ ಕುಹುಕವಾಡಿದೆ.
ಮನರಂಜನಾ ಅಂತರ್ಜಾಲ ತಾಣವೊಂದಕ್ಕೆ ಸಂದರ್ಶನ ನೀಡಿದ್ದ ಷಾ, ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಮ ಭಾವಕ್ಕೆ ವಿಷಾದ ವ್ಯಕ್ತಪಡಿಸಿದ್ದಲ್ಲದೆ, ಪಾಕಿಸ್ತಾನ ಶತ್ರು ಎಂದು ನಂಬುವಂತೆ ಭಾರತೀಯರಿಗೆ ತಲೆಕೆಡಿಸಲಾಗಿದೆ ಎಂದಿದ್ದರು.
ಅಲ್ಲದೆ ಅವರು ಪಾಕಿಸ್ತಾನಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ ಎಂದು ಹೇಳಿರುವುದಲ್ಲದೆ, "ವ್ಯಕ್ತಿ-ವ್ಯಕ್ತಿಯ ನಡುವಿನ ಬಾಂಧವ್ಯ ಅತಿ ಮುಖ್ಯ" ಎಂದಿದ್ದಾರೆ.
"ಪಾಕಿಸ್ತಾನದ ಬಗ್ಗೆ ಈ ದ್ವೇಷಕ್ಕೆ ಕಾರಣ ಏಕೆಂಬುದನ್ನು, ೨೬/೧೧ ದಾಳಿಯಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರು ಉತ್ತರಿಸಬಹುದು. ಪಾಕಿಸ್ತಾನ ಈಗಲೂ ರಕ್ತಪಾತ ಹರಿಸುವುದಕ್ಕೆ ಬದ್ಧವಾಗಿದೆ. ೨೬/೧೧ ದಾಳಿ ಮಾತ್ರವಲ್ಲ, ದೆಹಲಿ ಸಂಸತ್ ಭವನದ ಮೇಲೆ ದಾಳಿ ಮತ್ತು ಅದಕ್ಕೂ ಮುಂಚಿನ ಇನ್ನಿತರ ದಾಳಿಗಳಿಗೂ ಪಾಕಿಸ್ತಾನವೇ ನೇರ ಕಾರಣ" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯ ತಿಳಿಸಿದೆ.
ಈ ಹೇಳಿಕೆಗಳಿಂದ ಷಾ ಇಷ್ಟು ದಿವಸ ಕಷ್ಟ ಪಟ್ಟು ಗಳಿಸಿದ್ದನ್ನೆಲ್ಲಾ ಕಳೆದುಕೊಂಡಿದ್ದಾರೆ. ಅವರು ಈ ಹಿಂದೆ ಹೀಗಿರಲಿಲ್ಲ ಎಂದಿದೆ ಸಾಮ್ನಾ.
"ಕೇವಲ ಎರಡು ದಿನಗಳ ಹಿಂದೆ ಕಾಶ್ಮೀರದ ತಡೆಗಡಿಯಲ್ಲಿ ಒಂದು ಭಯೋತ್ಪಾದನಾ ದಾಳಿಯಾಯಿತು. ಅಲ್ಲಿ ಭಾರತೀಯ ಯೋಧನೊಬ್ಬ ಮೃತಪಟ್ಟರು. ಯೋಧನ ಪೋಷಕರನ್ನು ಕೇಳಬೇಕು ಅವರಿಗೆ ಪಾಕಿಸ್ತಾನದ ಮೇಲೆ ದ್ವೇಷವೇಕೆ" ಎಂದಿದೆ ಸೇನಾ.
"ನಾಸಿರುದ್ದೀನ್ ಷಾ ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ್ದನ್ನು ಒಂದು ಕ್ಷಣದಲ್ಲಿ ಕಳೆದುಕೊಂಡುಬಿಟ್ಟರು. ಲಾಹೋರಿನಲ್ಲಿ ಅವರ ಮೇಲೆ ಯಾರೋ ಮಾಟಮಂತ್ರ ಮಾಡಿಸಿರಬೇಕು. ಅವರು ಹಿಂದೆಂದೂ ಹೀಗಿರಲಿಲ್ಲ" ಎಂದಿದೆ ಸೇನಾ ಮುಖವಾಣಿ ಸಾಮ್ನಾ.