ಪ್ರಧಾನ ಸುದ್ದಿ

ಮಳೆಗೆ ಮುಳುಗಿದ ಕಣಿವೆ: 19ಕ್ಕೇರಿದ ಸಾವಿನ ಸಂಖ್ಯೆ

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಮತ್ತೊಮ್ಮೆ ಮುಳುಗಿದೆ, ಅಕಾಲಿಕ ಮಳೆಯಿಂದ ಅಕ್ಷರಶಃ ನಲುಗಿದೆ. 7 ತಿಂಗಳ ಹಿಂದಷ್ಟೇ ಆದ ಭಾರಿ ಪ್ರವಾಹದ ಆಘಾತದಿಂದ ಹೊರಬರುತ್ತಿರುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ವರುಣ ಆರ್ಭಟಿಸಿದ್ದಾನೆ.

ಝೀಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಶನಿವಾರ ಆರಂಭವಾದ ಮಳೆ ಇನ್ನೂ ಮುಂದುವರಿದಿದ್ದು, ಶ್ರೀನಗರದಲ್ಲಿ ಸೋಮವಾರ ಕುಸಿದಿದ ಎರಡು ಮನೆಗಳು ಒಟ್ಟು 11 ಮನೆಗಳು ಕುಸಿದಿವೆ. ಇನ್ನು ಪ್ರವಾಹದಿಂದ ನಲುಗಿರುವ ಬದಗಾಮ್ ಜಿಲ್ಲೆಯಲ್ಲಿ 21 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಇನ್ನು ಶ್ರೀನಗರ ಮತ್ತು ಬದಗಾಮ್ ಎರಡೂ ಜಿಲ್ಲೆಗಳಲ್ಲಿ ಒಟ್ಟು 19 ಮಂದಿ ಸಾವನ್ನಪ್ಪಿದ್ದು, ಈಗಾಗಲೇ 7 ಮೃತದೇಹಗಳು ಸಿಕ್ಕಿವೆ ಎನ್ನಲಾಗಿದೆ. ಈ ನಡುವೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರನ್ನು ಕಣಿವೆ ರಾಜ್ಯಕ್ಕೆ ಕಳುಹಿಸಿದ್ದು, ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ ಸ್ಥಳದಲ್ಲೇ ನಷ್ಟದ ಅಂದಾಜು ಮಾಡುವಂತೆ ಸೂಚಿಸಿದ್ದಾರೆ. ಅದರಂತೆ ನಖ್ವಿ ಜಮ್ಮು ಮತ್ತು ಕಾಶ್ಮೀರಕ್ಕೆ ದೌಡಾಯಿಸಿದ್ದಾರೆ. ಜತೆಗೆ, ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುವ ಭರವಸೆಯನ್ನೂ ಪ್ರಧಾನಿ ನೀಡಿದ್ದಾರೆ.

ಶಾಲೆ ಕಾಲೇಜುಗಳಿಗೆ 4 ದಿನ ರಜೆ
ರಾಜ್ಯದಲ್ಲಿ ಶಾಲೆ ಕಾಲೇಜುಗಳಿಗೆ 4 ದಿನ ರಜೆ ಘೋಷಿಸಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತಗಳ ಸರಣಿ ಮುಂದುವರಿದಿದೆ. ಇನ್ನೂ ಕೆಲವು ದಿನಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.  

235 ಕೋಟಿ ಬಿಡುಗಡೆ
ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ರು235 ಕೋಟಿ ಬಿಡುಗಡೆ ಮಾಡಿದೆ. ಇದೇ ವೇಳೆ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿರುವ ಕಾರಣ ಅಲ್ಲಿ ಸಿಲುಕಿಕೊಂಡವರನ್ನು ಹೆಲಿಕಾಪ್ಟರ್ ಸಹಾಯದಿಂದ ಮೇಲೆತ್ತಲಾಗಿದೆ. ಹವಾಮಾನ ಪರಿಸ್ಥಿತಿ ಸುಧಾರಿಸಿದಂತೆ ರಕ್ಷಣಾ ಕಾರ್ಯ ತ್ವರಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ ನೆರವು ಕೋರಿಕೆ
ಕಣಿವೆ ರಾಜ್ಯದಲ್ಲಿ ಪ್ರವಾಹ ಸ್ಥಿತಿಯನ್ನು ನಿಭಾಯಿಸಲು ಸಿಎಂ ಸಯೀದ್ ಅವರು ಸೇನೆಯ ನೆರವು ಕೋರಿದ್ದಾರೆ. ಇದಕ್ಕೆ ಒಪ್ಪಿರುವ ಸೇನೆಯು ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದೆ. ಇದೇ ವೇಳೆ, ಸೋಮವಾರ 50 ಸಿಬ್ಬಂದಿಯುಳ್ಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 2 ತಂಡಗಳು ಪಂಜಾಬ್‍ನಿಂದ ಕಾಶ್ಮೀರಕ್ಕೆ ಬಂದಿಳಿದಿವೆ.

ಕಾಶ್ಮೀರದ ಸ್ಥಿತಿ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರಕ್ಕೆ ಬೇಕಾದ ಎಲ್ಲ ಅಗತ್ಯ ನೆರವನ್ನು ಒದಗಿಸಲು ಕೇಂದ್ರ  ಬದ್ಧವಾಗಿದೆ.
-ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ

ಅಧಿಕಾರಿಗಳೆಲ್ಲರೂ ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯುವ, ರಕ್ಷಣಾ ಕಾರ್ಯ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. ಯಾರೂ ಹೆದರುವ ಅಗತ್ಯವಿಲ್ಲ.
- ಮುಫ್ತಿ ಮೊಹಮ್ಮದ್ ಸಯೀದ್, ಜಮ್ಮು-ಕಾಶ್ಮೀರ ಸಿಎಂ

ಈ ವಿಚಾರದಲ್ಲಿ ರಾಜಕೀಯ ಮಾಡುವ ಇಚ್ಛೆ ನಮಗಿಲ್ಲ. ಏಳು ತಿಂಗಳಲ್ಲೇ ಮತ್ತೊಮ್ಮೆ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಇದೆ.
-ಒಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರ ಮಾಜಿ ಸಿಎಂ

SCROLL FOR NEXT